ಸೋಲಿನ ಭಯದಿಂದ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್ ರಾವ್ ಕಾಂಗ್ರೇಸ್ ನಾಯಕನ ಮನೆ ಮೇಲೆ ದಾಳಿ ಮಾಡಿ ಬಂಧಿಸಿದ್ದಾರೆ, ಸಚಿವ ಡಿ.ಕೆ.ಶಿವಕುಮಾರ್

ಬೆಂಗಳೂರು, ಡಿ.4- ತೆಲಂಗಾಣ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ಭಯದಿಂದ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್ ರಾವ್ ಅವರ ಸರ್ಕಾರ ಮಧ್ಯರಾತ್ರಿ ಅಲ್ಲಿನ ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ರೇವಂತ್ ರೆಡ್ಡಿ ಅವರ ಮನೆ ಮೇಲೆ ದಾಳಿ ಮಾಡಿ ಬಂಧಿಸುವ ಮೂಲಕ, ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸದಾಶಿವನಗರದ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೆಲಂಗಾಣದಲ್ಲಿ ನಿನ್ನೆ ಮಧ್ಯರಾತ್ರಿ ನಡೆದ ಹೈಡ್ರಾಮಾವನ್ನು ಖಂಡಿಸಿದ್ದಾರೆ.

ಬೆಳಗಿನ ಜಾವ 4.30 ಸುಮಾರಿಗೆ ರೇವಂತ್ ರೆಡ್ಡಿ ಅವರ ಧರ್ಮ ಪತ್ನಿ ನನಗೆ ದೂರವಾಣಿ ಕರೆ ಮಾಡಿದ್ದರು. ಸುಮಾರು 500 ಮಂದಿ ಪೆÇಲೀಸರು ಮಧ್ಯರಾತ್ರಿ ಗೇಟ್ ಒಡೆದು ನಮ್ಮ ಮನೆಗೆ ನುಗ್ಗಿ, ಬೆಡ್‍ರೂಂನಲ್ಲಿ ಮಲಗಿದ್ದ ರೇವಂತ್ ರೆಡ್ಡಿ ಅವರನ್ನು ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲಿದ್ದ ಸ್ಥಳೀಯರು ಪೆÇಲೀಸರ ಕ್ರಮವನ್ನು ವಿಡಿಯೋ ಮಾಡಿ ನನಗೆ ಕಳುಹಿಸಿದ್ದಾರೆ.ಇದು ಪ್ರಜಾಪ್ರಭುತ್ವ ಕಗ್ಗೊಲೆ. ಅಲ್ಲಿನ ಸರ್ಕಾರದ ಕ್ರಮವನ್ನು ಖಂಡಿಸುತ್ತೇನೆ ಎಂದರು.

ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಚುನಾವಣೆಗೂ ಮೊದಲೇ ಸೋಲು ಒಪ್ಪಿಕೊಂಡಿದ್ದಾರೆ.ಅದಕ್ಕಾಗಿ ಹತಾಶೆಯಿಂದ ಇಂತಹ ಕ್ರಮ ಕೈಗೊಂಡಿದ್ದಾರೆ.ಕಾಂಗ್ರೆಸ್ ನವರು ಪ್ರಜಾಪ್ರಭುತ್ವದಲ್ಲಿ ಯಾರಿಗೂ ತೊಂದರೆ ಮಾಡಿಲ್ಲ. ಯಾರು ಎಲ್ಲಿ ಬೇಕಾದರು ಬಂದು ಪ್ರಚಾರ ಮಾಡಿಕೊಡಲು ಅವಕಾಶ ಮಾಡಿಕೊಟ್ಟಿದ್ದೇವೆ. ಇಂದು ರೇವಂತ್ ರೆಡ್ಡಿ ತೆಲಂಗಾಣದ ಸ್ಪೀಕರ್ ಹಾಗೂ ಪ್ರಭಾವಿ ನಾಯಕರ ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೋಗಬೇಕಿತ್ತು.ಅದನ್ನು ತಡೆಯಲು ಈ ರೀತಿ ಬಂಧಿಸಲಾಗಿದೆ.ಮುಂಜಾಗೃತಕ್ರಮ ಎಂದು ಅಲ್ಲಿನ ಸರ್ಕಾರ ಸಮರ್ಥಿಸಿಕೊಳ್ಳುತ್ತಿದೆ. ರೇವಂತ್ ಅವರು ಪ್ರಚಾರದಲ್ಲಿ ಭಾಗವಹಿಸಲು ಅವಕಾಶವಾಗದಂತೆ ಮಾಡಲು ಸೆಕ್ಷನ್ 506 ಹಾಕಿದ್ದಾರೆ ಎಂದು ಆರೋಪಿಸಿದರು.

ನಾವು ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೆಹಲಿ ಮತ್ತು ತೆಲಂಗಾಣ ಎರಡು ಕಡೆ ದೂರು ನೀಡುತ್ತೇವೆ. ಕೂಡಲೆ ಆಯೋಗ ಮಧ್ಯ ಪ್ರವೇಶ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ನಾನು ಅಲ್ಲಿ ಇರಬೇಕಿತ್ತು.ಆದರೆ ಇಲ್ಲಿ ಇವತ್ತು ಕಾವೇರಿ ಸೇರಿದಂತೆ ಹಲವಾರು ಸಭೆಗಳು ಇದ್ದರಿಂದ ಬಂದಿದ್ದೆ.ಚಂದ್ರಶೇಖರ್ ರಾವ್ ಏನೇ ಮಾಡಿದರೂ ಕಾಂಗ್ರೆಸ್ ನೇತೃತ್ವದ ಮಹಾಕೂಟ ಅಧಿಕಾರಕ್ಕೆ ಬರಲಿದೆ.ಜನ ಮೈತ್ರಿಕೂಟವನ್ನು ಬೆಂಬಲಿಸುತ್ತಾರೆ ಎಂದು ಹೇಳಿದರು.
ನಾನು ಪಕ್ಷದ ಸಣ್ಣ ಕಾರ್ಯಕರ್ತ ಲೀಡರ್ ಅಲ್ಲ, ಪಕ್ಷ ಕೊಟ್ಟ ಜವಾಬ್ದಾರಿ ನಿಭಾಯಿಸುತ್ತೇನೆ. ನನ್ನಂತೆ ಸುಮಾರು 30 ಮಂದಿ ಬೇರೆ ಬೇರೆ ರಾಜ್ಯದ ಮುಖಂಡರ ಅಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ