ಡಿ-ನೋಟಿಫಿಕೇಷನ್ ಪ್ರಕರಣ, ಮಾಜಿ ಸಿ.ಎಂ. ಯಡಿಯೂರಪ್ಪ ಅವರಿಗೆ ರಿಲೀಫ್

ಬೆಂಗಳೂರು, ಡಿ.4- ಹಲವಾರು ಡಿ-ನೋಟಿಫಿಕೇಷನ್ ಪ್ರಕರಣಗಳಿಂದ ಜರ್ಝರಿತರಾಗಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಕಾನೂನು ಹೋರಾಟದಲ್ಲಿ ಬಿಗ್ ರಿಲೀಫ್ ಸಿಕ್ಕಿದೆ.ಮತ್ತೆ ರಾಜ್ಯಪಾಲರ ಅನುಮತಿ ಪಡೆದು ಹೊಸದಾಗಿ ಪ್ರಕರಣ ದಾಖಲಿಸುವಂತೆ ದೂರುದಾರರಾದ ಸಿರಾಜುದ್ಧೀನ್ ಭಾಷಾ ಅವರಿಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.ಜೊತೆಗೆ ಪ್ರಕರಣವನ್ನು ರಾಜ್ಯ ಹೈಕೋರ್ಟ್‍ಗೆ ಮತ್ತೆ ವರ್ಗಾವಣೆ ಮಾಡಿದೆ.

ನ್ಯಾಯಾಲಯದ ಈ ಆದೇಶದಿಂದ ಯಡಿಯೂರಪ್ಪನವರಿಗೆ ತಾತ್ಕಾಲಿಕವಾಗಿ ಕಾನೂನು ಹೋರಾಟದಲ್ಲಿ ನೈತಿಕ ಗೆಲುವು ಸಿಕ್ಕಂತಾಗಿದೆ.ಏಕೆಂದರೆ, ಈ ಹಿಂದೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪನವರ ವಿರುದ್ಧ ವಿಚಾರಣೆ ನಡೆಸಲು ಈಗಿನ ರಾಜ್ಯಪಾಲರಾದ ವಿ.ಆರ್.ವಾಲಾ ಅರ್ಜಿದಾರರ ಮನವಿಯನ್ನು ತಿರಸ್ಕರಿಸಿದ್ದರು.

ಇದೀಗ ಸುಪ್ರೀಂಕೋರ್ಟ್ ಪುನಃ ಅರ್ಜಿದಾರರಾದ ಸಿರಾಜುದ್ದೀನ್ ಬಾಷ ಮತ್ತು ಬಾಲರಾಜ್ ಅವರಿಗೆ ರಾಜ್ಯಪಾಲರಿಂದ ಅನುಮತಿ ಪಡೆದೇ ಹೈಕೋರ್ಟ್‍ನಲ್ಲಿ ದೂರು ದಾಖಲಿಸುವಂತೆ ತೀರ್ಪು ನೀಡಿರುವುದರಿಂದ ಸದ್ಯಕ್ಕೆ ಯಡಿಯೂರಪ್ಪ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಈ ಹಿಂದೆ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಸಿರಾಜುದ್ದೀನ್ ಬಾಷ, ಬಾಲರಾಜ್ ಹಾಗೂ ರಾಜ್ಯಸರ್ಕಾರ ಸುಪ್ರೀಂಕೋರ್ಟ್‍ನಲ್ಲಿ ಪ್ರಶ್ನೆ ಮಾಡಿತ್ತು.
ಅರ್ಜಿ ವಿಚಾರಣೆ ನಡೆಸಿ ಇಂದು ಆದೇಶ ನೀಡಿರುವ ಸುಪ್ರೀಂಕೋರ್ಟ್, ಯಡಿಯೂರಪ್ಪನವರ ವಿರುದ್ಧ ಹೊಸದಾಗಿ ದೂರು ದಾಖಲಿಸಲು ರಾಜ್ಯಪಾಲರ ಅನುಮತಿ ಪಡೆಯಲೇಬೇಕೆಂದು ನಿರ್ದೇಶನ ನೀಡಿದೆ.

ಈ ಹಿಂದೆ ಸಿರಾಜುದ್ದೀನ್ ಬಾಷ ಮತ್ತು ಬಾಲರಾಜ್ ಅವರುಗಳು ಯಡಿಯೂರಪ್ಪನವರ ವಿರುದ್ಧ ಲೋಕಾಯುಕ್ತ ನ್ಯಾಯಾಲಯದಲ್ಲಿ ದೂರು ದಾಖಲಿಸಲು ವಿಚಾರಣೆಗೆ ಅನುಮತಿ ನೀಡಬೇಕೆಂದು ರಾಜ್ಯಪಾಲರಿಗೆ ದೂರು ನೀಡಿದ್ದರು.

ಆದರೆ, ಅಂದು ಯಡಿಯೂರಪ್ಪನವರು ಶಿವಮೊಗ್ಗ ಲೋಕಸಭಾ ಸಂಸದರಾಗಿದ್ದು ಹಾಗೂ ಮುಖ್ಯಮಂತ್ರಿಯಾಗಿಲ್ಲದ ಕಾರಣ ವಿಚಾರಣೆಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ರಾಜ್ಯಪಾಲರು ಅರ್ಜಿದಾರರ ಮನವಿಯನ್ನು ತಿರಸ್ಕಾರ ಮಾಡಿದ್ದರು. ಪುನಃ ಸುಪ್ರೀಂಕೋರ್ಟ್ ರಾಜ್ಯಪಾಲರ ಬಳಿಯೇ ಅನುಮತಿ ನೀಡಬೇಕೆಂದು ಅರ್ಜಿದಾರರಿಗೆ ನಿರ್ದೇಶನ ಕೊಟ್ಟಿರುವುದರಿಂದ ರಾಜ್ಯಪಾಲರ ಮುಂದಿನ ನಡೆ ಏನೆಂಬುದು ಕುತೂಹಲ ಕೆರಳಿಸಿದೆ.
ಪ್ರಕರಣವೇನು..? 2008ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ರಾಚೇನಹಳ್ಳಿ ಬಳಿ ಕಾನೂನು ಉಲ್ಲಂಘಿಸಿ ಡಿ ನೋಟಿಫಿಕೇಷನ್ ಮಾಡಿದ್ದರೆಂದು ಆರೋಪಿಸಲಾಗಿತ್ತು.

ಕಾನೂನು ಉಲ್ಲಂಘನೆ, ಸ್ವಜನ ಪಕ್ಷಪಾತ ಹಾಗೂ ದುರುದ್ದೇಶಪೂರ್ವಕವಾಗಿಯೇ ಡಿ ನೋಟಿಫೈ ಮಾಡಲಾಗಿದೆ ಎಂದು ಸಿರಾಜುದ್ದೀನ್ ಬಾಷ ಮತ್ತು ಬಾಲರಾಜ್ ಎಂಬುವವರು ಅಂದಿನ ರಾಜ್ಯಪಾಲರಾದ ಹಂಸರಾಜ್ ಭಾರದ್ವಾಜ್ ಅವರಿಗೆ ದೂರು ನೀಡಿದ್ದರು.

ರಾಜ್ಯಪಾಲರು ಕಾನೂನು ತಜ್ಞರ ಸಲಹೆ ಪಡೆದು ವಿಚಾರಣೆಗೆ ಅನುಮತಿ ನೀಡಿದ್ದರು. ರಾಜ್ಯಪಾಲರು ಮೇಲೆ ವಿಚಾರಣೆಗೆ ಅನುಮತಿ ನೀಡುತ್ತಿದ್ದಂತೆ ಲೋಕಾಯುಕ್ತ ನ್ಯಾಯಾಲಯದಲ್ಲಿ ದೂರು ದಾಖಲಾಗಿತ್ತು. ಅಂದಿನ ಲೋಕಾಯುಕ್ತ ನ್ಯಾಯಾಲಯದ ವಿಶೇಷ ನ್ಯಾಯಮೂರ್ತಿ ಸುಧೀಂದ್ರರಾವ್ ಅವರು ಯಡಿಯೂರಪ್ಪನವರಿಗೆ ಬಂಧನದ ಆದೇಶ ನೀಡಿದ್ದರು.
ಬಳಿಕ ಈ ಪ್ರಕರಣ ಹೈಕೋರ್ಟ್‍ನಲ್ಲಿ ವಿಚಾರಣೆ ನಡೆದು ಅಂದಿನ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಇಡೀ ಪ್ರಕರಣವನ್ನೇ ರದ್ದುಮಾಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ