ಬೆಂಗಳೂರು, ನ.30- ರಾಜನಂತೆ ಬದುಕಿದ್ದ ಅಂಬರೀಶ್ ಅವರನ್ನು ರಾಜನಂತೆ ಕಳುಹಿಸಿಕೊಟ್ಟಿದ್ದಕ್ಕಾಗಿ ರಾಜ್ಯ ಸರ್ಕಾರಕ್ಕೆ ಮತ್ತು ನಾಡಿನ ಜನತೆಗೆ ತುಂಬು ಹೃದಯದ ಧನ್ಯವಾದ ಸಲ್ಲಿಸುವುದಾಗಿ ಹಿರಿಯ ನಟಿ ಸುಮಲತಾ ಅಂಬರೀಶ್ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿಂದು ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಚಲನಚಿತ್ರರಂಗ ಆಯೋಜಿಸಿದ್ದ ಅಂಬಿಗೆ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಬರೀಶ್ ನನಗೆ ಸ್ನೇಹಿತರಾಗಿದ್ದರು, ಪತಿಯಾಗಿದ್ದರು, ತಂದೆಯಾಗಿದ್ದರು, ಅಣ್ಣನಾಗಿದ್ದರು, ಗುರು ಮಾರ್ಗದರ್ಶಕ ಎಲ್ಲವೂ ಆಗಿದ್ದರು. ಅವರ ಬಗ್ಗೆ ಹೇಳಲು ನನಗೆ ಪದಗಳೇ ಸಿಗುವುದಿಲ್ಲ. ಅವರು ಎಲ್ಲೇ ಇದ್ದರೂ ನಗುತ್ತಲೇ ನನ್ನನ್ನು ಆಶೀರ್ವದಿಸುತ್ತಾರೆ.
ಅಂಬಿ ನನಗೆ ಮಾತ್ರ ಸೀಮಿತ ಅಲ್ಲ. ಎಲ್ಲರಿಗೂ ಸ್ವಂತ.ಅದರಲ್ಲೂ ಮಂಡ್ಯದ ಜನ ಎಂದರೆ ಪಂಚಪ್ರಾಣ.ಕೊನೆಯ ಹಂತದಲ್ಲಿ ಮಂಡ್ಯಕ್ಕೆ ಕರೆದುಕೊಂಡು ಹೋಗಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದನ್ನು ನಾನು ಮರೆಯಲಾರೆ.ಅಂಬಿ ನಿಧನದಿಂದ ಅಂತ್ಯ ಸಂಸ್ಕಾರದ ಕೊನೆಯವರೆಗೂ ಕುಮಾರಸ್ವಾಮಿ ಅವರು ನಮ್ಮ ಜತೆಗಿದ್ದು ಸಹಕಾರ ನೀಡಿದರು.ಅವರ ಬೆಂಬಲಕ್ಕೆ ಧನ್ಯವಾದಗಳು. ಲಕ್ಷಾಂತರ ಜನ ಸೇರಿದ್ದರೂ ಶಾಂತಿಯುತವಾಗಿ ಅಂತ್ಯಸಂಸ್ಕಾರ ನಡೆಯಲು ಬಿಗಿ ಭದ್ರತೆ ಒದಗಿಸಿದ ಪೆÇಲೀಸ್ ಇಲಾಖೆಗೆ , ಸಹನೆಯಿಂದ ಸಹಕರಿಸಿದ ಅಭಿಮಾನಿಗಳಿಗೆ, ಕಷ್ಟಕಾಲದಲ್ಲಿ ಜತೆಗಿದ್ದ ಚಿತ್ರರಂಗಕ್ಕೆ, ಮಾಧ್ಯಮದವರಿಗೆ ಧನ್ಯವಾದ ತಿಳಿಸಿದರು.
ಕುಮಾರಸ್ವಾಮಿ ಅವರು ಸೂಕ್ತ ಕಾಲದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಂಡು ಎಲ್ಲವನ್ನೂ ಶಾಂತಿಯಿಂದ ನಡೆಸಿಕೊಟ್ಟರು. ರಾಜನಂತೆ ಅವರನ್ನು ಕಳುಹಿಸಿಕೊಟ್ಟಿದ್ದೀರಾ ಅದಕ್ಕಾಗಿ ನಿಮ್ಮ ಸಹಾಯವನ್ನು ಮರೆಯುವುದಿಲ್ಲ ಎಂದರು.
ಅಂಬರೀಶ್ ಅವರಿಗೆ ತಮ್ಮ ಪುತ್ರ ಅಭಿಷೇಕ್ ಅವರ ಚಿತ್ರವನ್ನು ನೋಡಬೇಕು ಎಂಬ ಆಸೆ ಇತ್ತು. ಆದರೆ, ಅದು ಈಡೇರಲಿಲ್ಲ. ಅವರ ಮೇಲೆ ನಾಡಿನ ಜನ ಇಟ್ಟ ಪ್ರೀತಿ ವಿಶ್ವಾಸವನ್ನು ಅಭಿಯ ಮೇಲೂ ಇರಲಿ ಎಂದು ಭಾವೋದ್ವೇಗಕ್ಕೆ ಒಳಗಾದರು.
ಅಂಬರೀಶ್ ಒಳ್ಳೆಯ ಮಗನಾಗಿದ್ದರು.ಒಳ್ಳೆಯ ಸಹೋದರ, ಒಳ್ಳೆಯ ಪತಿ, ಒಳ್ಳೆಯ ತಂದೆ, ಒಳ್ಳೆಯ ಸ್ನೇಹಿತ, ಉತ್ತಮ ರಾಜಕೀಯ ನಾಯಕ, ಸಮಾಜ ಸೇವಕ, ಕ್ರೀಡಾ ಆಸಕ್ತಿಗಾರ.ಎಲ್ಲದಕ್ಕಿಂತ ಒಳ್ಳೆಯ ಮನುಷ್ಯನಾಗಿದ್ದರು.ಒಳ್ಳೆಯ ಮನುಷ್ಯನಾಗಿಯೇ ಹೋದರು ಎಂದು ಸ್ಮರಿಸಿದರು.