ಅಂಬರೀಶ್ ಮರೆಯಲಾಗದ ಸ್ನೇಹ ಜೀವಿ ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ

ಬೆಂಗಳೂರು, ನ.30- ಅಂಬರೀಶ್ ಅವರು ಗೆಳೆತನಕ್ಕೆ ಕೊಟ್ಟಷ್ಟು ಬೆಲೆಯನ್ನು ಬೇರೆಯಾವುದಕ್ಕೂ ಕೊಟ್ಟಿರಲಿಲ್ಲ. ಅವರೊಬ್ಬ ಮರೆಯಲಾಗದ ಸ್ನೇಹ ಜೀವಿ ಎಂದು ಶ್ರೀ ಆದಿಚುಂಚನಗಿರಿ ಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ ಹೇಳಿದರು.

ನಗರದ ಅಂಬೇಡ್ಕರ್ ಭವನದಲ್ಲಿಂದು ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಚಲನಚಿತ್ರರಂಗ ಆಯೋಜಿಸಿದ್ದ ಅಂಬಿಗೆ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ಅಂಬರೀಶ್ ಅವರು ಭೌತಿಕವಾಗಿ ನಮ್ಮನ್ನು ಅಗಲಿದ್ದಾರೆ.ಆದರೆ, ಒಳ್ಳೆಯತನ, ಸ್ನೇಹಪರತೆಯಿಂದಾಗಿ ಸದಾ ನಮ್ಮೊಂದಿಗಿದ್ದಾರೆ. ಕಲೆಗೆ ಜಾತಿ, ಧರ್ಮ, ದೇಶದ ಇತಿಮಿತಿ ಇಲ್ಲ ಎಂದು ಅವರು ತೋರಿಸಿಕೊಟ್ಟಿದ್ದರು. ನಾಲ್ಕು ವರ್ಷಗಳ ಹಿಂದೆ ಅವರ ಆರೋಗ್ಯ ಕೆಟ್ಟಾಗ ನ್ಯೂಜೆರ್ಸಿಯ ಮಠದಲ್ಲಿ ನನಗೆ ಸಿಕ್ಕಿದ್ದರು.ಆ ಸಂದರ್ಭದಲ್ಲಿ ನೀವು ಕರೆ ಮಾಡಿದಾಗಲೆಲ್ಲಾ ಸುಮಲತಾ ಅವರಿಗೆ ಅಕ್ಕ ಹೇಗಿದ್ದಾರೆ ಎಂದು ಕೇಳಿದ್ದೀರಿ.ನನ್ನ ಬಗ್ಗೆ ಕೇಳಲ್ಲ ಎಂದು ಸ್ವಲ್ಪ ಮುನಿಸಿ ವ್ಯಕ್ತಪಡಿಸಿದ್ದರು.ಮಠಕ್ಕೆ ಬನ್ನಿ ಎಂದು ನಾನು ಆಹ್ವಾನ ನೀಡಿದಾಗ ನಮಗೆ ಬೇಕಾದ್ದನ್ನು ಕೊಡುತ್ತೀರಾ ಮಠಕ್ಕೆ ಬರುತ್ತೇನೆ ಎಂದು ತಮಾಷೆ ಮಾಡಿದ್ದರು.ಅವರ ಅಗಲಿಕೆ ತುಂಬಲಾರದ ನಷ್ಟ ಎಂದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಮಾತನಾಡಿ, ಅಂಬರೀಶ್ ಅವರ ಪ್ರತಿಭೆ ಅಪಾರವಾದದ್ದು, ಅವರ ವ್ಯಕ್ತಿತ್ವವೇ ಅವರನ್ನು ಈ ಮಟ್ಟಕ್ಕೆ ಬೆಳೆಸಿತು.ರಾಜಕಾರಣದಲ್ಲಿ ರಾಜ್ಯ ಸಚಿವರಾಗಿ, ಕೇಂದ್ರ ಸಚಿವರಾಗಿ ಜನಪ್ರಿಯತೆ ಗಳಿಸಿದರು. ರಾಜಕಾರಣದಲ್ಲಿ ಇನ್ನೂ ಎತ್ತರಕ್ಕೆ ಬೆಳೆಯಬಹುದಿತ್ತು. ಆದರೆ ಅವರ ನೇರ ನಡೆ ನುಡಿ ರಾಜಕಾರಣಕ್ಕೆ ತೊಡಕಾಯಿತು ಎಂದರು.

ಯಾವುದಕ್ಕೂ ಅವರು ತಲೆ ಕೆಡಿಸಿಕೊಳ್ಳದೆ ನಾನು ಇರೋದೇ ಹೀಗೆ ಎನ್ನುತ್ತಿದ್ದರು.ಅವರ ನೆನಪು ಸದಾ ನಮ್ಮೊಂದಿಗಿರುತ್ತದೆ.ದೇಶದಲ್ಲೆಡೆ ಅವರನ್ನು ಹಲವರು ನೆನೆಯುತ್ತಿದ್ದಾರೆ.ಜಮ್ಮು-ಕಾಶ್ಮೀರದ ಫಾರೂಕ್ ಅಬ್ದುಲ್ಲಾ ಅವರಿಗೂ ಕೂಡ ಅಂಬರೀಶ್ ಆತ್ಮೀಯರಾಗಿದ್ದರು. ದೇಶ-ವಿದೇಶಗಳಲ್ಲೂ ಅವರಿಗೆ ಅಪಾರ ಸ್ನೇಹ ಬಳಗವಿತ್ತು ಎಂದರು.

ನಿರ್ಮಾಪಕ ಮುನಿರತ್ನ ಮಾತನಾಡಿ, ಕಲಾವಿದರು ವಿಧಿವಶರಾದಾಗ ಸರ್ಕಾರ ಜಾಗ ಕೊಟ್ಟು ತಾವೇ ಮುಂದೆ ನಿಂತು ಅಂತ್ಯ ಸಂಸ್ಕಾರ ಮಾಡುವುದು ಕರ್ನಾಟಕದಲ್ಲಿ ಮಾತ್ರ. ಬೇರೆ ರಾಜ್ಯಗಳಲ್ಲಿ ಇಂತಹ ಪದ್ಧತಿ ನಡೆದು ಬಂದಿಲ್ಲ. ನಮ್ಮ ಕುರುಕ್ಷೇತ್ರ ಸಿನಿಮಾ ಅಂಬರೀಶ್ ಅವರ ಕೊನೆ ಸಿನಿಮಾವಾಗುತ್ತದೆ ಎಂದು ನಾನು ಭಾವಿಸಿರಲಿಲ್ಲ. ಕುರುಕ್ಷೇತ್ರದಲ್ಲಿ ಪಾತ್ರ ಮಾಡುವುದಿಲ್ಲ ಎಂದು ಅವರು ನಿರಾಕರಿಸಿದ್ದರು.ಒಂದು ತಿಂಗಳು ಸಮಯ ತೆಗೆದುಕೊಂಡು ಕೊನೆಗೆ ಒಪ್ಪಿಕೊಂಡರು ಎಂದು ಸ್ಮರಿಸಿದರು.

ಹಿರಿಯ ನಟ ಜಗ್ಗೇಶ್ ಮಾತನಾಡಿ, ನನ್ನಂಥವನನ್ನು ನೀನು ನಾಯಕನಾಗಬೇಕು ಎಂದು ಬೆನ್ನುತಟ್ಟಿದ್ದು ಅಂಬರೀಶ್ ಅವರು.ಅವರ ಆಸೆಯಂತೆ ಕಲಾವಿದರಿಗಾಗಿ ಒಂದು ಸೂರು ನಿರ್ಮಿಸಬೇಕು.ನಾವೆಲ್ಲರೂ ಅದರಡಿ ಕೆಲಸ ಮಾಡಬೇಕು.ಇದಕ್ಕಾಗಿ ನಾವು ನಮ್ಮ ಸ್ವಪ್ರತಿಷ್ಟೆಗಳನ್ನು ಬದಿಗಿಡಬೇಕು.ಒಂದೇ ತಾಯಿ ಮಕ್ಕಳಂತೆ ಬದುಕಬೇಕು.ಅಂಬರೀಶ್ ಅವರ ಕನಸಿನಂತೆ ಬಾಳಬೇಕು.ಕಲಾವಿದರ ಸಂಘವನ್ನು ರಾಜ್‍ಕುಮಾರ್ ಆರಂಭಿಸಿದರು.ಅದನ್ನು ಕಟ್ಟಲು ಅಂಬರೀಶ್ ಅವರು ಸಾಕಷ್ಟು ಶ್ರಮಿಸಿದ್ದಾರೆ.ರಾಕ್‍ಲೈನ್ ವೆಂಕಟೇಶ್, ದೊಡ್ಡಣ್ಣ ಅಂಬರೀಶ್ ಅವರಿಗೆ ಹೆಗಲು ಕೊಟ್ಟಿದ್ದಾರೆ ಎಂದರು.

ಅಂಬರೀಶ್ ಅವರು ಮನಸ್ಸಿಟ್ಟು ಕೆಲಸ ಮಾಡಿದ್ದರೆ ಸಿದ್ದರಾಮಯ್ಯ, ಕುಮಾರಸ್ವಾಮಿ ಅವರಿಗಿಂತಲೂ ಮೊದಲು ಸಿಎಂ ಆಗಬಹುದಿತ್ತು ಎಂದ ಜಗ್ಗೇಶ್, ಕರ್ನಾಟಕಕ್ಕೆ ಹಾಗೂ ಚಿತ್ರರಂಗಕ್ಕೆ ರಾಜ್‍ಕುಮಾರ್, ವಿಷ್ಣುವರ್ಧನ್ ಹಾಗೂ ಅಂಬರೀಶ್ ಕೊಡುಗೆ ಅಪಾರವಾಗಿದೆ.ಅವರಿಗೆ ಸರ್ಕಾರ ಜಾಗ ಸೇರಿದಂತೆ ಎಲ್ಲಾ ರೀತಿ ಗೌರವ ಕೊಡುವುದು ಸೂಕ್ತ.ಆದರೆ, ಮುಂದೆ ಯಾರೇ ಆದರೂ ತಮ್ಮ ಸಮಾಧಿಗಾಗಿ ತಾವೇ ಜಾಗ ಖರೀದಿಸಿಕೊಳ್ಳಲಿ ಸರ್ಕಾರದ ಮುಂದೆ ಬೇಡುವುದು ಬೇಡ ಎಂದು ಕಲಾವಿದರಲ್ಲಿ ಮನವಿ ಮಾಡಿದರು.
ನನಗಾಗಿ ಒಂದು ಎಕರೆ ಜಾಗ ತೆಗೆದಿಟ್ಟುಕೊಳ್ಳುವಂತೆ ನನ್ನ ಪತ್ನಿಗೆ ಈಗಾಗಲೇ ಹೇಳಿದ್ದೇನೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ