ಬೆಂಗಳೂರು, ಅ.18-ಅತೃಪ್ತ ಶಾಸಕರ ಬಂಡಾಯ ಚಟುವಟಿಕೆಗಳು ತಣ್ಣಗಾದ ಹೊತ್ತಿನಲ್ಲೇ ಅಧಿಕಾರಿಗಳ ವರ್ಗಾವಣೆ ಮತ್ತು ವಿವಿಧ ನೇಮಕಾತಿಗಳು ದೋಸ್ತಿ ಪಕ್ಷಗಳ ನಡುವೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ.
ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಸಮ್ಮಿಶ್ರ ಸರ್ಕಾರದಲ್ಲಿ ಇಕ್ಕಟ್ಟಿನ ಪರಿಸ್ಥಿತಿಯನ್ನು ತಂದೊಡ್ಡುತ್ತಿದ್ದು, ಕಾಂಗ್ರೆಸ್ ಪಾಳಯದ ಸಚಿವರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ.
ಇಲಾಖೆಯ ಮುಖ್ಯಸ್ಥರು ಮತ್ತು ಪ್ರಮುಖ ಅಧಿಕಾರಿಗಳನ್ನು ಮುಖ್ಯಮಂತ್ರಿ ಕಚೇರಿಯಿಂದಲೇ ನಿಯೋಜನೆ ಮಾಡಲಾಗುತ್ತಿದ್ದು, ಈ ಸಂದರ್ಭದಲ್ಲಿ ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬ ಆಕ್ಷೇಪಗಳು ಕೇಳಿ ಬಂದಿವೆ.
ಕೆಲವು ಪ್ರಭಾವಿ ಸಚಿವರು ಕೂಡ ಈ ರೀತಿಯ ಬೆಳವಣಿಗೆಗಳಿಂದ ಮುಜುಗರಕ್ಕೊಳಗಾಗಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಕೆಲವು ಐಎಎಸ್ ಅಧಿಕಾರಿಗಳನ್ನು ಇಲಾಖಾ ಮುಖ್ಯಸ್ಥರನ್ನಾಗಿ ನೇಮಿಸಲಾಗಿದ್ದು, ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಚಿವರು, ತಮ್ಮ ಇಲಾಖೆ ಅಧಿಕಾರಿಗಳನ್ನು ಬದಲಾವಣೆ ಮಾಡುವಂತೆ ಮುಖ್ಯ ಕಾರ್ಯದರ್ಶಿಗಳ ಮೇಲೆ ಒತ್ತಡ ಹೇರಿದ್ದಾರೆ.
ಆದರೆ, ಸಚಿವರ ಬೇಡಿಕೆಯನ್ನು ತಳ್ಳಿ ಹಾಕಿರುವ ಮುಖ್ಯಕಾರ್ಯದರ್ಶಿ, ಮುಖ್ಯಮಂತ್ರಿ ಆದೇಶದ ಅನುಸಾರ ಮಾತ್ರ ಇಲಾಖಾ ಅಧಿಕಾರಿಗಳ ವರ್ಗಾವಣೆ ಮಾಡಲಾಗುತ್ತದೆ. ಸಚಿವರು ಮುಖ್ಯಮಂತ್ರಿಯಿಂದಲೇ ಶಿಫಾರಸು ಮಾಡಿಸಬೇಕೆಂಬ ಉತ್ತರ ಸಿಕ್ಕಿದೆ ಎನ್ನಲಾಗಿದೆ.
ಇದು ಜೆಡಿಎಸ್-ಕಾಂಗ್ರೆಸ್ ಸೇರಿದಂತೆ ಬಹಳಷ್ಟು ಸಚಿವರ ಅಸಮಾಧಾನಕ್ಕೆ ಕಾರಣವಾಗಿದೆ. ತಮ್ಮ ಇಲಾಖೆಗೆ ಬೇಕಾದಂತ ಅಧಿಕಾರಿಗಳನ್ನು ನೇಮಿಸಿಕೊಡಲಾಗದೇ ಇದ್ದರೆ ಸಮರ್ಥವಾಗಿ ಇಲಾಖೆಯನ್ನು ನಿಭಾಯಿಸುವುದು ಹೇಗೆ ಎಂಬ ಪ್ರಶ್ನೆಯನ್ನು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ಮುಂದಿಟ್ಟಿದ್ದಾರೆ ಎನ್ನಲಾಗಿದೆ.
ಸದ್ಯಕ್ಕೆ ಯಾರೂ ಬಹಿರಂಗ ಹೇಳಿಕೆ ನೀಡಬೇಡಿ, ಉಪ ಚುನಾವಣೆ ಮುಗಿಯಲಿ. ನಂತರ ಸಮನ್ವಯ ಸಮಿತಿ ಸಭೆ ನಡೆಸುವ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ಸಮಾಧಾನಪಡಿಸಿದ್ದಾರೆ ಎನ್ನಲಾಗಿದೆ.
ಇನ್ನೊಂದೆಡೆ ಭೂ ನ್ಯಾಯಮಂಡಳಿ, ಆರಾಧಾನಸಮಿತಿ, ಆಶ್ರಯ ಸಮಿತಿ ಸೇರಿದಂತೆ ಸ್ಥಳೀಯವಾಗಿ ವಿವಿಧ ಸಮಿತಿಗಳ ರಚನೆಯಲ್ಲಿ ಜೆಡಿಎಸ್ ಕಾರ್ಯಕರ್ತರಿಗೆ ಹೆಚ್ಚಿನ ಆದ್ಯತೆ ಸಿಗುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಅಸಮಧಾನಗಳು ಕೇಳಿಬರುತ್ತಿವೆ.
ಸ್ಥಳೀಯ ಮಟ್ಟದ ಕಾರ್ಯಕರ್ತರಿಗೆ ಅವಕಾಶ ನೀಡದೇ ಹೋದರೆ ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆ ಕಷ್ಟ ಸಾಧ್ಯವಾಗಲಿದೆ. ಹಾಗಾಗಿ ಸಮ್ಮಿಶ್ರ ಸರ್ಕಾರದಲ್ಲಿ 2:1 ಪ್ರಮಾಣದಲ್ಲೇ ಕಾರ್ಯಕರ್ತರ ನೇಮಕಾತಿಯ ಪಟ್ಟಿ ಸಿದ್ದವಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದಾರೆ.
ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಎಲ್ಲಾ ಸಮಿತಿಗಳಿಗೂ ಜೆಡಿಎಸ್ ಕಾರ್ಯಕರ್ತರನ್ನು ಹೆಚ್ಚಾಗಿ ನೇಮಿಸುತ್ತಿದ್ದು, ನೆಪಮಾತ್ರಕ್ಕೆ ಕಾಂಗ್ರೆಸ್ ಕಾರ್ಯಕರ್ತರನ್ನು ನಿಯೋಜನೆ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಹೀಗಾಗಿ ಸಮ್ಮಿಶ್ರ ಸರ್ಕಾರದ ಮೂಲ ಒಪ್ಪಂದದಂತೆ ಕಾಂಗ್ರೆಸ್ ಕಾರ್ಯಕರ್ತರಿಗೆ ಎರಡು ಭಾಗ, ಜೆಡಿಎಸ್ ಕಾರ್ಯಕರ್ತರಿಗೆ ಒಂದು ಭಾಗ ಅಧಿಕಾರದಲ್ಲಿ ಪಾಲು ನೀಡಬೇಕು. ನಿಗಮ ಮಂಡಳಿ ಸೇರಿದಂತೆ ವಿವಿಧ ಸಮಿತಿಗಳ ನೇಮಕಾತಿಗೆ ಕಾಂಗ್ರೆಸ್ಗೆ ನ್ಯಾಯೋಚಿತ ಪಾಲು ನೀಡುವಂತೆ ಪಕ್ಷ ಒತ್ತಾಯಿಸಿರುವುದಾಗಿ ಮೂಲಗಳು ತಿಳಿಸಿವೆ.