ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಚಿವ ಡಿಕೆಶಿ ಟಾಂಗ್

ಬೆಂಗಳೂರು, ಅ.18- ಲಿಂಗಾಯಿತ ಪ್ರತ್ಯೇಕ ಧರ್ಮ ನಿರ್ಧಾರದಿಂದ ತಪ್ಪಾಗಿದೆ ಎಂದು ಕ್ಷಮೆಯಾಚನೆ ಮಾಡುವ ಮೂಲಕ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ನಿನ್ನೆ ರಂಭಾಪುರಿ ಸುಕ್ಷೇತ್ರದಲ್ಲಿ ದಸರಾ ಆಚರಣೆಯಲ್ಲಿ ಭಾಗವಹಿಸಿದ್ದ ಡಿ.ಕೆ.ಶಿವಕುಮಾರ್ ಅವರು, ತಮ್ಮ ಹಿಂದಿನ ಸರ್ಕಾರದ ನಿರ್ಧಾರಕ್ಕೆ ಬಹಿರಂಗವಾಗಿ ಕ್ಷಮೆ ಕೇಳುವ ಮೂಲಕ ಸಿದ್ದರಾಮಯ್ಯ ಅವರು ಮುಜುಗರಕ್ಕೊಳಗಾಗುವಂತೆ ಮಾಡಿದ್ದಾರೆ.

ಈ ಹಿಂದೆ ದಾವಣಗೆರೆಯಲ್ಲಿ ನಡೆದ ಸಮಾವೇಶದಲ್ಲಿ ಶಾಮನೂರು ಶಿವಶಂಕರಪ್ಪ ಮತ್ತು ಇತರರು ಪ್ರತ್ಯೇಕ ಲಿಂಗಾಯಿತ ಧರ್ಮಕ್ಕಾಗಿ ಮನವಿ ಸಲ್ಲಿಸಿದ್ದರು. ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು, ಲಿಂಗಾಯಿತ, ವೀರಶೈವ ಸಮುದಾಯಗಳು ಒಟ್ಟಾಗಿ ಬಂದರೆ ಲಿಂಗಾಯಿತ ಧರ್ಮಕ್ಕೆ ಶಿಫಾರಸು ಮಾಡುವುದಾಗಿ ಹೇಳಿಕೆ ನೀಡಿದ್ದರು.

ಇದು ಸುಮಾರು ಆರೇಳು ತಿಂಗಳುಗಳ ಕಾಲ ರಾಜ್ಯದಲ್ಲಿ ಗಂಭೀರ ಚರ್ಚೆಗೆ ಒಳಗಾಗಿ ಪ್ರತಿಭಟನೆಗೂ ಕಾರಣವಾಗಿತ್ತು. ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದ ಸಿದ್ದರಾಮಯ್ಯ ಅವರು ಸಮಿತಿಯ ಶಿಫಾರಸ್ಸನ್ನು ಆಧರಿಸಿ ಕೊನೆಗೂ ಲಿಂಗಾಯಿತ ಪ್ರತ್ಯೇಕ ಧರ್ಮಕ್ಕಾಗಿ ಶಿಫಾರಸು ಮಾಡಿದ್ದರು.

ಅದು ಕೇಂದ್ರ ಸರ್ಕಾರದ ಅಂಗಳದಲ್ಲಿದ್ದು, ಆ ಶಿಫಾರಸ್ಸನ್ನು ತಿರಸ್ಕರಿಸಿತ್ತು. ಆದರೆ, ಆ ಹಂತದಲ್ಲಿ ನಡೆದ ಬೆಳವಣಿಗೆಗಳು ಕಾಂಗ್ರೆಸ್‍ಗೆ ಭಾರೀ ನಷ್ಟ ಉಂಟು ಮಾಡಿತ್ತು. ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದರೂ ಸಿದ್ದರಾಮಯ್ಯನವರ ಸರ್ಕಾರ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆಯಲು ವಿಫಲವಾಯಿತು.

ಆದರೂ ಸಿದ್ದರಾಮಯ್ಯ ಅವರು ತಮ್ಮ ಸರ್ಕಾರದ ನಿರ್ಧಾರವನ್ನು ಕಾಲ ಕಾಲಕ್ಕೆ ಬಲವಾಗಿ ಸಮರ್ಥಿಸಿಕೊಂಡೇ ಬರುತ್ತಿದ್ದರು. ಇದೇ ಮೊದಲ ಬಾರಿಗೆ ಕಾಂಗ್ರೆಸ್ ಪಾಳಯದಿಂದ ಪ್ರಭಾವಿ ಸಚಿವರೊಬ್ಬರು ಲಿಂಗಾಯಿತ ಪ್ರತ್ಯೇಕ ಧರ್ಮ ವಿಷಯದಲ್ಲಿ ಬಹಿರಂಗ ಕ್ಷಮೆಯಾಚನೆ ಮಾಡಿದ್ದಾರೆ.

ಈ ಮೂಲಕ ಸಿದ್ದರಾಮಯ್ಯ ಅವರ ನಿರ್ಧಾರಕ್ಕೆ ಈಗ ಪಶ್ಚಾತಾಪದ ಮಾತುಗಳು ಕೇಳಿಬರುತ್ತಿವೆ. ಚುನಾವಣೆ ಫಲಿತಾಂಶದ ನಂತರ ಆಂತರಿಕವಾಗಿ ಬಹಳಷ್ಟು ನಾಯಕರು ಸಿದ್ದರಾಮಯ್ಯ ಸರ್ಕಾರ ಲಿಂಗಾಯಿತ ಧರ್ಮ ವಿಷಯದಲ್ಲಿ ಕೈ ಹಾಕಿದ್ದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸುತ್ತಿದ್ದರಾದರೂ ಬಹಿರಂಗವಾಗಿ ಯಾರೂ ಬಾಯ್ಬಿಟ್ಟಿರಲಿಲ್ಲ.
ಒಂದು ಹಂತದಲ್ಲಿ ಆಗ ಕೆಪಿಸಿಸಿ ಅಧ್ಯಕ್ಷರಾಗಿದ್ದ ಪರಮೇಶ್ವರ್ ಕೂಡ ಧರ್ಮದ ವಿಷಯದಲ್ಲಿ ಹಸ್ತಕ್ಷೇಪ ಬೇಡ ಎಂದಿದ್ದರು. ಆದರೆ, ಸಿದ್ದರಾಮಯ್ಯ ಸರ್ಕಾರ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ನಿರ್ಧಾರ ತೆಗೆದುಕೊಂಡಿತ್ತು. ಈಗ ಕಾಂಗ್ರೆಸ್ ನಾಯಕರಿಗೆ ತಮ್ಮ ತಪ್ಪನ್ನು ತಿದ್ದುಕೊಳ್ಳುವ ಜ್ಞಾನೋದಯ ಆದಂತಿದೆ.

ಐದು ಕ್ಷೇತ್ರಗಳ ಉಪ ಚುನಾವಣೆ ವೇಳೆ ಡಿ.ಕೆ.ಶಿವಕುಮಾರ್ ಅವರ ಕ್ಷಮೆಯಾಚನೆಯ ಹೇಳಿಕೆ ಯಾವ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ