ಬೆಂಗಳೂರು,ಆ.27- ಶೀಘ್ರದಲ್ಲೇ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನವಾಗಲಿದ್ದು, ರಾಜ್ಯದಲ್ಲಿ ಹೊಸ ರಾಜಕೀಯ ಸಮೀಕರಣ ಉಂಟಾಗಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ಭವಿಷ್ಯ ನುಡಿದಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಸದ್ಯದಲ್ಲೇ ಅಧಿಕಾರ ಕಳೆದುಕೊಳ್ಳಲಿದೆ ಎಂಬ ಮಾತುಗಳು ಕೇಳಿಬರುತ್ತಿರುವ ಸಂದರ್ಭದಲ್ಲೇ ಅನಂತಕುಮಾರ್ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಯಾವುದೇ ತತ್ವ ಸಿದ್ದಾಂತ ಇಲ್ಲದೆ ಕೇವಲ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕೆಂಬ ಏಕೈಕ ಕಾರಣಕ್ಕಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿವೆ. ಇದು ಬಾಲಗ್ರಹ ಪೀಡಿತ ಸರ್ಕಾರವಾಗಿರುವುದರಿಂದ ಹೆಚ್ಚು ದಿನ ಮುಂದುವರೆಯುವುದಿಲ್ಲ ಎಂದು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎತ್ತು ಏರಿಗೆ ಕೋಣ ನೀರಿಗೆ ಎಂಬಂತೆ ಕಾಂಗ್ರೆಸ್-ಜೆಡಿಎಸ್ ಪರಸ್ಪರ ವಿರುದ್ದ ದಿಕ್ಕಿಗೆ ಸಾಗುತ್ತಿವೆ. ಎರಡೂ ಪಕ್ಷಗಳಲ್ಲಿ ಪರಸ್ಪರ ಅಪನಂಬಿಕೆ ಹೆಚ್ಚಾಗುತ್ತಿದ್ದು, ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ. ಇಂತಹ ಸರ್ಕಾರ ಇದ್ದರೂ ಒಂದೇ. ಇಲ್ಲದಿದ್ದರೂ ಒಂದೇ ಎಂದರು.
ಜೆಡಿಎಸ್ ಮತ್ತು ಕಾಂಗ್ರೆಸ್ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರಲಿಲ್ಲ. ಬಿಜೆಪಿಗೆ ಜನ ಹೆಚ್ಚಿನ ಸ್ಥಾನ ನೀಡದಿದ್ದರೂ ಜನಾದೇಶ ನಮ್ಮ ಪಕ್ಷದ ಪರವಾಗೇ ಇತ್ತು. ಹಿಂಬಾಗಿಲ ಮೂಲಕ ಅಪವಿತ್ರ ಮೈತ್ರಿ ಮಾಡಿಕೊಂಡು ಎರಡೂ ಪಕ್ಷಗಳು ಅಧಿಕಾರ ಹಿಡಿದಿವೆ. ಇದು ಪ್ರಜಾಪ್ರಭುತ್ವಕ್ಕೆ ವಿರುದ್ಧ ನಡವಳಿಕೆ ಎಂದು ಕಿಡಿಕಾರಿದರು.
ರಾಜಕಾರಣ ನಿಂತ ನೀರಲ್ಲ. ಹಳೆ ನೀರು ಕೊಚ್ಚಿ ಹೋಗಿ ಹೊಸ ನೀರು ಬಂದಂತೆ ಈ ಸರ್ಕಾರ ಸದ್ಯದಲ್ಲೇ ಪತನವಾಗಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಸಂದೇಹವಿಲ್ಲ. ನಾವು ಯಾವುದೇ ಕಾರಣಕ್ಕೂ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುವುದಿಲ್ಲ ಎಂದು ಅನಂತಕುಮಾರ್ ಸ್ಪಷ್ಟಪಡಿಸಿದರು.
ತಮ್ಮ ಆಂತರಿಕ ಕಚ್ಚಾಟದಿಂದಲೇ ಉಭಯ ಪಕ್ಷಗಳ ಮುಖಂಡರ ಕಿತ್ತಾಟ ಜಗಜ್ಜಾಹೀರಾವಾಗಿದೆ. ನಾವು ಕೂಡ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದೇವೆ. ಸಮಯ ಬಂದಾಗ ಏನು ಮಾಡಬೇಕೋ ಅದನ್ನೇ ಮಾಡುತ್ತೇವೆ ಎಂದು ಸೂಚ್ಯವಾಗಿ ಹೇಳಿದರು.