ಸಾರಿಗೆ ಉಪಕರ ಏರಿಕೆ ಹೆಚ್ಚಳ ಮಾಡಬಾರದೆಂದು ಕೇಂದ್ರ ಸಚಿವ ಅನಂತಕುಮಾರ್ ಆಗ್ರಹ

 

ಬೆಂಗಳೂರು,ಆ.27-ಯಾವುದೇ ಕಾರಣಕ್ಕೂ ನಗರದ ಜನತೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಾರಿಗೆ ಉಪಕರ ಏರಿಕೆ ಹೆಚ್ಚಳ ಮಾಡಬಾರದೆಂದು ಕೇಂದ್ರ ಸಚಿವ ಅನಂತಕುಮಾರ್ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇವಲ 40 ಕೋಟಿ ತೆರಿಗೆ ಸಂಗ್ರಹಕ್ಕೆ ಕೋಟಿ ಜನರ ಮೇಲೆ ತೆರಿಗೆ ಹಾಕುವುದು ಸರಿಯಲ್ಲ. ಮೊದಲು ಬಿಬಿಎಂಪಿಯಲ್ಲಿ ಸೋರಿಕೆಯಾಗುತ್ತಿರುವ ತೆರಿಗೆಯನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು.
ಈಗಾಗಲೇ ನಗರದ ಜನತೆ ತೆರಿಗೆ ಭಾರದಿಂದ ಬಳಲುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಸಾರಿಗೆ ಸಚಿವರ ಸೂಚನೆಯಂತೆ ಬಿಬಿಎಂಪಿಯವರು ಸಾರಿಗೆ ಉಪಕರ ಹೆಚ್ಚಳ ಮಾಡಲು ಮುಂದಾಗಿರುವುದು ಸರಿಯಲ್ಲ. ತಕ್ಷಣವೇ ವಾಪಸ್ ಪಡೆಯಲಿ ಎಂದು ಮನವಿ ಮಾಡಿದರು.

ಬಿಬಿಎಂಪಿಯಲ್ಲಿ ತೆರಿಗೆ ಸೋರಿಕೆ ತಡೆಗಟ್ಟಿದರೆ ಮೂರು ಸಾವಿರ ಕೋಟಿ ವಾರ್ಷಿಕ ಲಾಭ ಗಳಿಸಬಹುದು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಿರಂತರವಾಗಿ ಸೋರಿಕೆಯಾಗುತ್ತದೆ. ಇದನ್ನು ಮಾಡದ ಬಿಬಿಎಂಪಿ ಜನರಿಗೆ ತೆರಿಗೆ ಹೆಚ್ಚಿಸಲು ಮುಂದಾಗಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ತೆಲಂಗಾಣ ಸರ್ಕಾರ ಕರ್ನಾಟಕದ ಶಿವರಾಮಪುರದಲ್ಲಿ ಅತಿಕ್ರಮಣ ಮಾಡಿರುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಪ್ರತಿಯೊಂದು ರಾಜ್ಯಕ್ಕೂ ತನ್ನದೇ ಆದ ಗಡಿ ಇರುತ್ತದೆ. ಕಾನೂನು ಬಾಹಿರವಾಗಿ ಅತಿಕ್ರಮಣ ಮಾಡಿದರೆ ಕರ್ನಾಟಕ ಕೂಡ ಸುಮ್ಮನಿರುವುದಿಲ್ಲ ಎಂದು ನೆರೆ ರಾಜ್ಯದವರು ಅರ್ಥ ಮಾಡಿಕೊಳ್ಳಬೇಕೆಂದು ಅನಂತಕುಮಾರ್ ಎಚ್ಚರಿಸಿದರು.

ಕೂಡಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್ ಅವರ ಜೊತೆ ಮಾತನಾಡಿ ಸಮಸ್ಯೆಯನ್ನು ಇತ್ಯರ್ಥ ಪಡಿಸಬೇಕು. ಅತಿಕ್ರಮಣವಾಗಿದ್ದರೆ ಕೂಡಲೇ ಅಧಿಕಾರಿಗಳಿಂದ ಮಾಹಿತಿ ಪಡೆಯಲಿ ಎಂದು ಸಲಹೆ ಮಾಡಿದರು.
ರಾಜ್ಯದ ನೆಲಜಲ, ನಾಡುನುಡಿ ಕಾಯ್ದುಕೊಳ್ಳುವುದು ಸರ್ಕಾರದ ಆದ್ಯಕರ್ತವ್ಯ. ನೆರೆರಾಜ್ಯ ದಬ್ಬಾಳಿಕೆ ಮಾಡಿದರೂ ನಾವು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಗುಡುಗಿದರು.
ಇದೇ ವೇಳೆ ಮಾಜಿ ವಿಧಾನಪರಿಷತ್ ಸದಸ್ಯೆ ತಾರಾ ಸೇರಿದಂತೆ ಅನೇಕ ಸಹೋದರಿಯರು ಅನಂತ್‍ಕುಮಾರ್ ಅವರಿಗೆ ರಾಖಿ ಕಟ್ಟಿ ಶುಭ ಕೋರಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ