ಜಾನಪದ ಕಲೆ ಗ್ರಾಮೀಣ ಸಂಸ್ಕøತಿಯ ಜೀವಂತಿಕೆಯ ದ್ಯೋತಕ

 

ಬೆಂಗಳೂರು, ಆ.19- ಜಾನಪದ ಕಲೆಗಳು ಗ್ರಾಮೀಣ ಸಂಸ್ಕøತಿಯ ಜೀವಂತಿಕೆಯ ದ್ಯೋತಕ. ಇವುಗಳ ಬಗ್ಗೆ ಯುವಕರಲ್ಲಿ ಮತ್ತು ನಗರ ಪ್ರದೇಶದ ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ ಹೇಳಿದರು.
ರವೀಂದ್ರಕಲಾಕ್ಷೇತ್ರದಲ್ಲಿಂದು ಡಾ.ವೇಮಗಲ್ ನಾರಾಯಣಸ್ವಾಮಿ ಸಾಂಸ್ಕøತಿಕ ಪ್ರತಿಷ್ಠಾನವತಿಯಿಂದ ಆಯೋಜಿಸಲಾಗಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ನಗರದಲ್ಲಿ ವಾಸಿಸುವ ಯುವ ತಲೆಮಾರಿಗೆ ಗ್ರಾಮೀಣ ಕಲೆಗಳ ಪರಿಚಯವೇ ಇಲ್ಲ. ಅವರಲ್ಲಿ ಗ್ರಾಮೀಣ ಕಲೆಗಳ ಬಗ್ಗೆ ಆಸಕ್ತಿ ಮೂಡಿಸಬೇಕಿದೆ. ನಮ್ಮ ಸಂಸ್ಕøತಿ, ಆಚಾರ, ವಿಚಾರಗಳು ನೆಲೆಯೂರಿರುವುದು ಗ್ರಾಮೀಣ ಕಲಾಪ್ರಕಾರಗಳಲ್ಲಿ. ಜನಪದ ಸಾಹಿತ್ಯ ಜನರ ಮನಸ್ಸನ್ನು ನೇರವಾಗಿ ತಲುಪಲು ಸಾಧ್ಯ ಎಂದರು.
ಸಂಗೀತ ನಿರ್ದೇಶಕ ಹಾಗೂ ಸಾಹಿತಿ ಹಂಸಲೇಖ ಅವರು ಚಿತ್ರಗೀತೆಗಳಲ್ಲಿ ಜನಪದ ಸಾಹಿತ್ಯವನ್ನು ಅಳವಡಿಸುವ ಮೂಲಕ ಜನಪದ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಹಂಸಲೇಖ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಪ್ರಶಸ್ತಿಯ ಜತೆ ನೀಡಲಾದ 25 ಸಾವಿರ ರೂ.ಗಳ ನಗದನ್ನು ಹಂಸಲೇಖ ಅವರು ನೆರೆ ಸಂತ್ರಸ್ತರ ಪರಿಹಾರಕ್ಕೆ ನೀಡುವುದಾಗಿ ಘೋಷಿಸಿದರು.
ಕೊಡಗು ಹಾಗೂ ಇತರೆ ಭಾಗಗಳ ಜನ ಸಂಕಷ್ಟದಲ್ಲಿದ್ದಾರೆ. ಅವರಿಗೆ ನಮ್ಮ ಕೈಲಾದ ಸಹಾಯ ಮಾಡಬೇಕು. ಈ ಪ್ರಶಸ್ತಿಯ ಮೊತ್ತವನ್ನು ಮುಖ್ಯಮಂತ್ರಿ ಅವರ ಪರಿಹಾರ ನಿಧಿಗೆ ತಲುಪಿಸಿ ಬಿಡಿ ಎಂದು ಹಂಸಲೇಖ ಹೇಳಿದರು.
ಮಳೆ ನೈಸರ್ಗಿಕವಾಗಿ ಬರುತ್ತದೆ. ಪ್ರಕೃತಿಗೆ ನಾವು ಮಾಡಿರುವ ದ್ರೋಹದಿಂದ ಇಂದು ಪ್ರವಾಹ ಭೀತಿ ಎದುರಾಗಿದೆ. ಇದನ್ನು ಎದುರಿಸಲು ನಾವು ಸಿದ್ದರಾಗಬೇಕಾಗಿದೆ ಎಂದು ತಿಳಿಸಿದರು.

ಸರ್ವರಿಗೂ ಸಮಪಾಲು, ಸಮಬಾಳು ಎಂಬುದು ಜನತಂತ್ರದ ಆಶಯ. ಆದರೆ, ಇಂದು ಭಯವೇ ಧರ್ಮವಾಗಿದೆ. ದೇಶದಲ್ಲಿ ಏಕರೂಪ ಸಿದ್ಧಾಂತಗಳನ್ನು ಏರಲಾಗುತ್ತಿದೆ. ಜನಪದದಲ್ಲಿ ಇಂತಹ ಧೋರಣೆಗಳನ್ನು ಪ್ರತಿರೋಧಿಸಲು ಮತ್ತು ತಮ್ಮ ಅಸ್ತಿತ್ವದ ರಕ್ಷಣೆಗಾಗಿ ಸಾಕಷ್ಟು ಸಲಹೆಗಳಿವೆ ಎಂದು ಹೇಳಿದರು.
ಸುಪ್ರೀಂಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಮಾತನಾಡಿ, ಗ್ರಾಮೀಣ ಪ್ರತಿಭೆಗಳಿಗೆ ಹೆಚ್ಚು ಪೆÇ್ರೀ ಸಿಗಬೇಕು. ಯಾವುದೇ ನಿರೀಕ್ಷೆಗಳಿಲ್ಲದೆ ಜನಪದರು ಸಮಾಜಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ.
ಈ ಪ್ರಕಾರವನ್ನು ಹೆಚ್ಚು ಬೆಳೆಸುತ್ತಿರುವ ಪ್ರತಿಭೆಗಳಾದ ಹಂಸಲೇಖ, ಗಾಯಕಿ ಬಿ.ಕೆ.ಸುಮಿತ್ರ, ಗಾನ ಕೋಗಿಲೆ ಗಂಗಮ್ಮ ಹಾಗೂ ಮತ್ತಿತರರಿಗೆ ಪದ್ಮಶ್ರೀ ಪ್ರಶಸ್ತಿ ನೀಡಬೇಕು. ಒಂದು ವೇಳೆ ನಾನು ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿದ್ದರೆ ಖಂಡಿತ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲು ಶಿಫಾರಸು ಮಾಡುತ್ತಿದ್ದೆ ಎಂದು ಅವರು ಹೇಳಿದರು.

ನಮ್ಮಲ್ಲಿ ಜಾನಪದ ಸಂಸ್ಕøತಿ ಕಳೆದುಹೋಗಿರುವುದರಿಂದಲೇ ಕೋಮುಗಲಭೆಗಳಾಗುತ್ತಿವೆ. ಅಶಾಂತಿಯುಂಟಾಗುತ್ತಿದೆ. ಬರವಣಿಗೆ ಇಲ್ಲದ ಸಂದರ್ಭದಲ್ಲೂ ಜಾನಪದರು ಹಾಡುಗಾರಿಕೆ ಮೂಲಕ ಜನರಲ್ಲಿ ನೈತಿಕ ಮೌಲ್ಯ ಹಾಗೂ ಜೀವನದ ಆಶಯಗಳನ್ನು ಬಿತ್ತಿದರು. ಪ್ರಾಚೀನ ಇತಿಹಾಸ, ಕೆಲ, ಸಂಸ್ಕøತಿ, ಸಂಸ್ಕಾರಗಳು ಜನಪದರಿಂದಲೇ ಹರಿದು ಬಂದಿದೆ ಎಂದು ತಿಳಿಸಿದರು.
ಸಂಸದರಾದ ಕೆ.ಸಿ.ರಾಮಮೂರ್ತಿ, ಪ್ರತಿಷ್ಠಾನದ ಗೌರವಾಧ್ಯಕ್ಷ ಡಾ.ವೇಮಗಲ್ ನಾರಾಯಣಸ್ವಾಮಿ, ಅಧ್ಯಕ್ಷ ಹಿ.ಚಿ.ಬೋರಲಿಂಗಯ್ಯ, ಆನಂದ ಮದಲಗೆರೆ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ