ಕಿರಣ್ ಮಜುಂದಾರ್ ಶಾಗೆ ಕಾನೂನು ಹೋರಾಟದಲ್ಲಿ ಜಯ

 

ಬೆಂಗಳೂರು, ಆ.19-ಉದ್ಯಾನನಗರಿಯಲ್ಲಿನ ಪ್ರತಿಷ್ಠಿತ ಕಿಂಗ್‍ಫಿಷರ್ ಟವರ್ಸ್‍ನಲ್ಲಿ ಫ್ಲಾಟ್‍ಗಳನ್ನು ಖರೀದಿಸಿದ್ದ ಖ್ಯಾತ ಮಹಿಳಾ ಉದ್ಯಮಿ ಮತ್ತು ಬಯೋಕಾನ್ ಅಧ್ಯಕ್ಷೆ-ವ್ಯವಸ್ಥಾಪಕ ನಿರ್ದೇಶಕಿ ಕಿರಣ್ ಮಜುಂದಾರ್ ಶಾ ಹಾಗೂ ಅನಿವಾಸಿ ಭಾರತೀಯ ವಿವೇಕ್ ಮಥಿಯಾಸ್‍ಗೆ ಕಾನೂನು ಹೋರಾಟದಲ್ಲಿ ಜಯ ಲಭಿಸಿದೆ.
ಇವರಿಬ್ಬರಿಗೆ ಸೇರಿದ ಆಸ್ತಿಗಳ ಜಪ್ತಿ ಕ್ರಮವನ್ನು ಹಣ ದುರ್ಬಳಕೆ ತಡೆ ಕಾಯ್ದೆ(ಪಿಎಂಎಲ್‍ಎ) ಮೇಲ್ಮನವಿ ನ್ಯಾಯಾಧಿಕರಣ ಪಕ್ಕಕ್ಕೆ ತಳ್ಳಿರುವುದರಿಂದ ಜಾರಿ ನಿರ್ದೇಶನಾಲಯಕ್ಕೆ(ಇಡಿ) ಹಿನ್ನಡೆಯಾಗಿದೆ.
ಬಾಂಕುಗಳಿಂದ ಕೋಟ್ಯಂತರ ರೂ.ಗಳ ಸಾಲ ಎತ್ತುವಳಿ ಮಾಡಿ ಉದ್ದೇಶ ಪೂರ್ವಕ ಸುಸ್ತಿದಾರರಾಗಿ ಲಂಡನ್‍ಗೆ ಪರಾರಿಯಾಗಿರುವ ಕಳಂಕಿತ ಮದ್ಯದ ದೊರೆ ವಿಜಯ್ ಮಲ್ಯ ಬಗ್ಗೆ ತನಿಖೆ ನಡೆಸುತ್ತಿರುವ ಇಡಿ ಅಧಿಕಾರಿಗಳು, ಇದರ ಭಾಗವಾಗಿ ಕಿರಣ್ ಮತ್ತು ವಿವೇಕ್ ಅವರಿಗೆ ಸೇರಿದ ಫ್ಲಾಟ್‍ಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದರು.

ಈ ಪ್ರಕರಣ ಪಿಎಂಎಲ್‍ಎ ಮೇಲ್ಮನವಿ ನ್ಯಾಯಮಂಡಳಿ ಮೆಟ್ಟಿಲೇರಿತ್ತು. ಈ ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಧಿಕರಣ, ಕಿರಣ್ ಮತ್ತು ವಿವೇಕ್ ಆಸ್ತಿ ಜಪ್ತಿ ಕ್ರಮವನ್ನು ತಳ್ಳಿಹಾಕಿದೆ. ವಿಜಯ್ ಮಲ್ಯ, ಅಥವಾ ಕಿಂಗ್‍ಫಿಷನ್ ಏರ್‍ಲೈನ್ಸ್ ಅಥವಾ ಯೂನೈಟೆಡ್ ಬ್ಯೂವರೀಸ್‍ಗೂ ಇವರಿಬ್ಬರಿಗೂ ಯಾವುದೇ ಸಂಪರ್ಕ ಅಥವಾ ಸಂಬಂಧ ಇಲ್ಲ. ಇದನ್ನು ಸಾಬೀತು ಮಾಡಲು ಯಾವುದೇ ಬಲವಾದ ಸಾP್ಷÁ್ಯಧಾರಗಳು ಅಥವಾ ಪುರಾವೆ ಇಲ್ಲ ಎಂದು ತಿಳಿಸಿದೆ.
ಇಡಿ ಅಧಿಕಾರಿಗಳು ಏಕಪಕ್ಷೀಯ ಕ್ರಮಗಳನ್ನು ಕೈಗೊಂಡಿದ್ದಾರೆ. ತಮ್ಮ ಸಮರ್ಥನೆಗಳನ್ನು ವಿವರಿಸಲು ಕಿರಣ್ ಮತ್ತು ವಿವೇಕ್ ಅವರಿಗೆ ಅವಕಾಶ ನೀಡಲಿಲ್ಲ ಎಂದು ನ್ಯಾಯಮಂಡಳಿ ತರಾಟೆಗೆ ತೆಗೆದುಕೊಂಡಿದೆ.

ಮಲ್ಯ ಒಡೆತನ ವಸತಿ ಯೋಜನೆ ಕಿಂಗ್‍ಫಿಷರ್ಸ್ ಟವರ್ಸ್‍ನಲ್ಲಿ ಕಿರಣ್ 2012ರಲ್ಲಿ 26.12 ಕೋಟಿ ರೂ.ಗಳ ತಮ್ಮ ಸಂಪಾದನೆ ಹಣ ನೀಡಿದ ಫ್ಲಾಟ್ ಖರೀದಿಸಿದ್ದರು. ಮೊನೊಕೊದ ಉದ್ಯಮಿ ವಿವೇಕ್ ಮಥಿಯಾಸ್ ಅವರು ಅದೇ ವರ್ಷ 49.84 ಕೋಟಿ ರೂ.ಗಳನ್ನು ನೀಡಿ ಎರಡು ಫ್ಲಾಟ್‍ಗಳನ್ನು ಕೊಂಡಿದ್ದರು.
ರಾಷ್ಟ್ರೀಕೃತ ಬ್ಯಾಂಕ್‍ಗಳಿಂದ 9,000 ಕೋಟಿ ರೂ.ಗಳ ಸಾಲ ಎತ್ತುವಳಿ ಮಾಡಿ ಉದ್ಯಮದಲ್ಲಿ ನಷ್ಟ ಅನುಭವಿಸಿ ದೇಶಭ್ರಷ್ಟರಾಗಿ ವಿದೇಶಕ್ಕೆ ಮದ್ಯದ ದೊರೆ ಮಲ್ಯ ಹಾರಿದ್ದರು. ನಂತರ ಇಡಿ ಅಧಿಕಾರಿಗಳು ಕಿಂಗ್‍ಫಿಷರ್ಸ್ ಟವರ್ಸ್‍ನಲ್ಲಿನ 500 ಕೋಟಿ ರೂ.ಗಳ ಮೌಲ್ಯದ ಹಲವಾರು ಫ್ಲಾಟ್‍ಗಳೂ ಸೇರಿದಂತೆ 8,000 ಕೋಟಿ ರೂ.ಗಳ ಬೆಲೆಬಾಳುವ ಸ್ಥಿರಾಸ್ತಿ ಮತ್ತು ಚರಾಸ್ತಿಗಳನ್ನು ಜಪ್ತಿ ಮಾಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ