ಬೆಂಗಳೂರು, ಆ.14- ರಾಜ್ಯ ಸರ್ಕಾರ ಸರಕಾರಿ ಶಾಲೆಗಳಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಮಕ್ಕಳಿಗೆ ಉಚಿತವಾಗಿ ನೀಡಿರುವ ಶೂ ಮತ್ತು ಸಾಕ್ಸ್ ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಸಮಗ್ರ ತನಿಖೆ ನಡೆಸಿ ವರದಿ ನೀಡಬೇಕು ಎಂದು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದೆ.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ಅವರು ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ತನಿಖೆ ನಡೆಸಿ 15 ದಿನಗಳೊಳಗೆ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.
ಕಳೆದ ಜೂನ್ ತಿಂಗಳಲ್ಲಿ 46 ಲಕ್ಷ ಸರ್ಕಾರಿ ಶಾಲಾ ಮಕ್ಕಳಿಗೆ ರಾಜ್ಯ ಸರ್ಕಾರ ಉಚಿತವಾಗಿ ಶೂ ಮತ್ತು ಸಾಕ್ಸ್ ವಿತರಣೆ ಮಾಡಿತ್ತು. ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಈ ಯೋಜನೆಯನ್ನು ಜಾರಿಮಾಡಲಾಗಿತ್ತು.
1ರಿಂದ 10ನೇ ತರಗತಿವರೆಗೆ ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೆ ಉಚಿತವಾಗಿ ಶೂ ಮತ್ತು ಸಾಕ್ಸ್ ವಿತರಣೆ ಮಾಡುವ ಯೋಜನೆಯನ್ನು ಕಾಂಗ್ರೆಸ್ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದರು.
ಇದರಂತೆ ಈ ಬಾರಿ ಮೂರು ವಿಧದ ಶೂ ಖರೀದಿ ಮಾಡಲು ಸರ್ಕಾರ ಸೂಚನೆ ಕೊಟ್ಟಿತ್ತು. 265, 295 ಹಾಗೂ 325 ರೂ.ಗಳಲ್ಲಿ ಯಾವುದಾದರು ಒಂದನ್ನು ಖರೀದಿ ಮಾಡಿ ವಿತರಿಸುವಂತೆ ಸರ್ಕಾರ ಸೂಚಿಸಿತ್ತು. ಇದgಂತೆ 325 ರೂ. ಬೆಲೆಯ ಶೂಗಳನ್ನು ಖರೀದಿ ಮಾಡಿ ವಿತರಣೆ ಮಾಡಲಾಗಿತ್ತು.
ಇತ್ತೀಚೆಗೆ ಶಿಕ್ಷಣ ಸಚಿವರು ತಮ್ಮ ತವರು ಜಿಲ್ಲೆ ಚಾಮರಾಜನಗರಕ್ಕೆ ಭೇಟಿ ನೀಡಿ ಮಕ್ಕಳಿಗೆ ವಿತರಣೆ ಮಾಡಿದ್ದ ಶೂ ಮತ್ತು ಸಾಕ್ಸ್ಗಳ ಗುಣಮಟ್ಟವನ್ನು ಪರೀಕ್ಷೆ ಮಾಡಿದ್ದರು,ಬಹುತೇಕ ಮಕ್ಕಳ ಶೂ ಮತ್ತು ಸಾಕ್ಸ್ ಕಳಪೆ ಗುಣಮಟ್ಟದಿಂದ ಕೂಡಿದ್ದಲ್ಲದೆ ಒಂದು ತಿಂಗಳ ಅವಧಿಯಲ್ಲಿ ಕಿತ್ತು ಹೋಗಿದ್ದುದು ಕಂಡುಬಂದಿತ್ತು.
ಇದನ್ನು ಗಂಭೀರವಾಗಿ ತೆಗೆದುಕೊಂಡ ಸಚಿವರು ಬೆಂಗಳೂರಿನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ, ಡಿಡಿಪಿಐ, ಬಿಇಒ ಸೇರಿದಂತೆ ಮತ್ತಿತರ ಅಧಿಕಾರಿಗಳ ಸಭೆ ನಡೆಸಿದ್ದರು. ಮಕ್ಕಳಿಗೆ ನೀಡಿರುವ ಶೂ ಕಳಪೆ ಗುಣಮಟ್ಟದಿಂದ ಕೂಡಿದ್ದು, ಇದರಲ್ಲಿ ಗೋಲ್ ಮಾಲ್ ನಡೆದಿರುವ ಅನುಮಾನವನ್ನು ಸಚಿವರು ವ್ಯಕ್ತಪಡಿಸಿದ್ದರು.
ಸಭೆಯಲ್ಲಿ ಭಾಗವಹಿಸಿದ್ದ ಡಿಡಿಪಿಐ ಮತ್ತು ಬಿಇಒಗಳು ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿ ಮಕ್ಕಳಿಗೆ ನೀಡಿರುವ ಶೂ ಮತ್ತು ಸಾಕ್ಸ್ಗಳು ಗುಣಮಟ್ಟದಿಂದ ಕೂಡಿಲ್ಲ, ಇದರಲ್ಲಿ ಅವ್ಯವಹಾರ ನಡೆದಿರುವ ಸಾಧ್ಯತೆ ಇದೆ ಎಂದು ಸಚಿವರ ಗಮನಕ್ಕೆ ತಂದಿದ್ದಾರೆ.
ಹೀಗಾಗಿ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.