82 ದಿನಗಳಲ್ಲಿ ಹೊಸ ದಾಖಲೆ ಬರೆದ ಸಿಎಂ ಎಚ್.ಡಿ.ಕುಮಾರಸ್ವಾಮಿ

 

ಬೆಂಗಳೂರು, ಆ.14- ಅನಿರೀಕ್ಷಿತವಾಗಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಎಚ್.ಡಿ.ಕುಮಾರಸ್ವಾಮಿಯವರು 82 ದಿನಗಳ ಅವಧಿಯಲ್ಲಿ ಹೊಸ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
ಅಧಿಕಾರ ವಹಿಸಿಕೊಂಡ ಮೊದಲ ದಿನದಿಂದ ಹಿಡಿದು ಈವರೆಗೂ 82 ದಿನಗಳ ಅವಧಿಯಲ್ಲಿ 43 ದೇವಸ್ಥಾನಗಳಿಗೆ ಭೇಟಿ ನೀಡುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
ರಾಜ್ಯದಲ್ಲಿ ಈವರೆಗೂ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಯಾವುದೇ ಮುಖ್ಯಮಂತ್ರಿಗಳು ಅಲ್ಪಾವಧಿಯಲ್ಲಿ ಇಷ್ಟು ದೇವಸ್ಥಾನಗಳಿಗೆ ಭೇಟಿ ನೀಡಿದ ಉದಾಹರಣೆಗಳಿಲ್ಲ. ಇಂದಿನ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಹರದನಹಳ್ಳಿಯ ಮನೆದೇವರ ದರ್ಶನ ಸೇರಿ 43 ದೇವಸ್ಥಾನಗಳಿಗೆ ಭೇಟಿ ಕೊಟ್ಟಂತಾಗುತ್ತದೆ.
ವಿಶೇಷವೆಂದರೆ ಕುಮಾರಸ್ವಾಮಿಯವರು ಮಂಡ್ಯ, ಮೈಸೂರು, ತುಮಕೂರು ಬೆಂಗಳೂರಿನಲ್ಲಿರುವ ದೇವಸ್ಥಾನಗಳಲ್ಲಿ ಮಾತ್ರ ದೇವರ ದರ್ಶನ ಪಡೆದಿದ್ದಾರೆ. ಉಳಿದಂತೆ ಸೋಮವಾರ ಮಾತ್ರ ಧರ್ಮಸ್ಥಳ, ಮಂಗಳವಾರ ಕುಕ್ಕೆಸುಬ್ರಹ್ಮಣ್ಯ ಹಾಗೂ ಶೃಂಗೇರಿಯಲ್ಲಿರುವ ಶಾರದಾ ಪೀಠ ದರ್ಶನ ಮಾಡಿದ್ದರು.
ವಿಶೇಷತೆಯೆಂದರೆ ದೇವರು, ಧರ್ಮ ಅತಿಯಾಗಿ ನಂಬುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಇಷ್ಟು ಕಡಿಮೆ ಅವಧಿಯಲ್ಲಿ ದೇವಸ್ಥಾನಗಳಿಗೆ ಭೇಟಿ ನೀಡಿರಲಿಲ್ಲ.
ಅಧಿಕಾರ ಸ್ವೀಕರಿಸುವ ಮುನ್ನವೇ ಮಠ ಮಂದಿರಗಳಿಗೆ ಭೇಟಿ ಕೊಡುತ್ತಿದ್ದ ಕುಮಾರಸ್ವಾಮಿಯವರು ಇದನ್ನು ಇಂದು ಕೂಡ ಮುಂದುವರಿಸಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ಮೊದಲಿನಿಂದಲೂ ಹೆಚ್ಚಿನ ಧಾರ್ಮಿಕ ಶ್ರದ್ಧೆ ಹಾಗೂ ನಂಬಿಕೆ ಇರುವ ಕುಟುಂಬವಾಗಿದೆ. ಕುಮಾರಸ್ವಾಮಿ ಅವರು ಕೂಡ ಇದಕ್ಕೆ ಹೊರತಾಗಿಲ್ಲ. ಆದರೆ ಇತ್ತೀಚೆಗೆ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾದ ನಂತರ ಅವರು ದೇವಸ್ಥಾನಗಳಿಗೆ ಭೇಟಿ ನೀಡುವುದು ಹೆಚ್ಚಾಗಿದೆ ಎಂದು ಅವರ ಆಪ್ತರು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ