ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ದೇಶದ ಉದ್ಯಮದ ಬೆನ್ನೆಲುಬು : ಸಚಿವ ಆರ್ ವಿ ದೇಶಪಾಂಡೆ

ಹುಬಳ್ಳಿ:  ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ದೇಶದ ಉದ್ಯಮದ ಬೆನ್ನೆಲುಬುಗಳಾಗಿವೆ. ದೇಶದ ಜಿಡಿಪಿಗೆ ಶೇ.೪೦ ರಷ್ಟು ಹಾಗೂ ಉದ್ಯೊಗ ಸೃಷ್ಠಿಯಲ್ಲಿ ಶೇ. ೫೫ ರಷ್ಟು ಕೊಡುಗೆ ಸಣ್ಣ ಅತಿಸಣ್ಣ ಹಾಗೂ ಗುಡಿ ಕೈಗಾರಿಕೆಗಳಿಂದಿದೆ. ಇಂತಹ ಸಣ್ಣ ಕೈಗಾರಿಕೆಗಳಿಗೆ ಉತ್ತೆಜನ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರ್ಕಾರ ಬದ್ದವಾಗಿದೆ ಎಂದು ಕಂದಾಯ, ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ, ಜೀವನೋಪಾಯ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ವಿ. ದೇಶಪಾಂಡೆ ಹೇಳಿದರು. 

ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ, ಬೆಂಗಳೂರು ಹಾಗೂ ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಹುಬ್ಬಳ್ಳಿಯ ಗೋಕುಲ್ ರಸ್ತೆಯಲ್ಲಿರುವ ಕೈಗಾರಿಕಾ ವಸಾಹತುವಿನ ಡ್ರೆನ್ ಮತ್ತು ಕಲ್ವರ್ಟ್ ನಿರ್ಮಾಣದ ಅಡಿಗಲ್ಲು ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹುಬ್ಬಳ್ಳಿಯ ಗೋಕಲ್ ರಸ್ತೆಯಲ್ಲಿರುವ ಕೈಗಾರಿಕಾ ವಸಹಾತುವಿನ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಯುಜಿಡಿ ನಿರ್ಮಾಣಕ್ಕೆ ೭ ಕೋಟಿ ರೂಪಾಯಿ ಅನುದಾನ ನೀಡಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಪ್ರಸ್ತುತ ೬.೫೫ ಕೋಟಿ ರೂಪಾಯಿಗಳನ್ನು ಡ್ರೆನ್ ಹಾಗೂ ಕಲ್ವರ್ಟ್ಗಳ ನಿರ್ಮಾಣಕ್ಕೆ ಬಿಡುಗಡೆ ಮಾಡಲಾಗಿದೆ. ಈ ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು.

ರಾಜ್ಯದಲ್ಲಿ ಕೃಷಿ, ತೋಟಗಾರಿಕೆ, ಸಣ್ಣ ಕೈಗಾರಿಕೆಗಳು ಹಾಗೂ ದೊಡ್ಡ ಕೈಗಾರಿಕೆಗಳು ಬೆಳೆಯಬೇಕು. ತಾಂತ್ರಿಕ ಶಿಕ್ಷಣ ಪಡೆದು ನಿರುದ್ಯೊಗ ಸಮಸ್ಯೆಯಲ್ಲಿರುವ ಯುವಕರಿಗೆ ಕೆಲಸ ನೀಡುವಂತಾಗಬೇಕು. ಸ್ವಂತ ಕೈಗಾರಿಕೆಗಳನ್ನು ಬೆಳಸಲು ಯುವಕರಿಗೆ ಪ್ರೊತ್ಸಾಹಿಸಬೇಕು. ಕೈಗಾರಿಕೆಗಳಿಗೆ ಅಗತ್ಯವಿರುವ ಮಾನವ ಸಂಪನ್ಮೂಲಗಳನ್ನು ಒದಗಿಸುವ ನಿಟ್ಟಿನಲ್ಲಿ ಪಠ್ಯಕ್ರಮಗಳನ್ನು ರಚಿಸಿ ಯುವಕರಿಗೆ ಕೌಶಲ್ಯಾಭಿವೃದ್ಧಿ ಇಲಾಖೆ ವತಿಯಿಂದ ತರಬೇತಿಯನ್ನು ನೀಡಲಾಗುವುದು.

ಉತ್ತರ ಕರ್ನಾಟದ ಭಾಗದಲ್ಲಿ ಹೆಚ್ಚು ಕೈಗಾರಿಕೆಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಿದೆ. ಕೊಪ್ಪಳದಲ್ಲಿ ಶೀಘ್ರವಾಗಿ ಆಟಿಕೆಗಳ ಉತ್ಪಾದನೆಯ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಲಾಗುವುದು. ಉತ್ತರ ಕರ್ನಾಟಕದ ಪ್ರತಿಯೊಂದು ಜಿಲ್ಲೆಗಳಲ್ಲಿ ವಿವಿಧ ರೀತಿಯ ಉದ್ಯಮಗಳನ್ನು ಸ್ಥಾಪಿಸುವ ಯೋಜನೆಯನ್ನು ಸರ್ಕಾರ ರೂಪಿಸಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ಮಾತನಾಡಿದ ಸಣ್ಣ ಕೈಗಾರಿಕೆಗಳ ಸಚಿವರಾದ ಎಸ್.ಆರ್.ಶ್ರಿನಿವಾಸ್ ಅವರು ಸರ್ಕಾರ ಸಣ್ಣ ಕೈಗಾರಿಕೆ ಇಲಾಖೆಗೆ ಬಜಟ್‌ನಲ್ಲಿ ೪೧೬ ಕೋಟಿ ರೂಪಾಯಿಗಳನ್ನು ಒದಗಿಸಿದೆ.

ಗೋಕಲ ರಸ್ತೆಯಲ್ಲಿ ಕೈಗಾರಿಕಾ ವಸಹಾತುವಿನ ೭೨ ಸೈಟುಗಳ ಹಾಗೆ, ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತದಿಂದ ಅಭಿವೃದ್ಧಿ ಪಡಿಸಲಾಗಿರುವ ಕೈಗಾರಿಕ ಪ್ರದೇಶದ ಒಟ್ಟು ೩೫೦೦ ದಿಂದ ೪೦೦೦ ಸೈಟುಗಳ ಸೇಲ್ ಡೀಡ್ ಆಗದಿರುವುದು ಗಮನಕ್ಕೆ ಬಂದಿದೆ. ಆದಷ್ಟು ಬೇಗ ಉದ್ಯಮಿಗಳಿಗೆ ಸೈಟಿನ ಸೇಲ್ ಡೀಡ್ ಮಾಡಿಕೊಡಲಾಗುವುದು.

ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಅಭಿವೃದ್ಧಿ ಪಡಿಸಿರುವ ಕೈಗಾರಿಕಾ ಪ್ರದೇಶದಲ್ಲಿನ ಸೈಟುಗಳನ್ನು ಕೊಳ್ಳಲು ಉದ್ಯಮದಾರರು ಮುಂದೆ ಬಾರದಿರುವುದು ಕಂಡುಬಂದಿದೆ. ಇದಕ್ಕೆ ಕಾರಣ ಸೈಟುಗಳಿಗೆ ನಿಗದಿಪಡಿಸಿರುವ ಅವೈಜ್ಞಾನಿಕ ದರ.  ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲಾಗುದು.

ಜಿಲ್ಲಾಧಿಕಾರಿಗಳು ತಿಂಗಳಿಗೊಮ್ಮೆ ಸಣ್ಣ ಉದ್ಯಮದಾರರ ಸಭೆ ನಡೆಸಿ ಅನುಪಾಲನ ವರದಿಯನ್ನು ಸರ್ಕಾರಕ್ಕೆ ಕಳುಹಿಸಲು ಸೂಚಿಸಲಾಗಿದೆ. ಎಕಗವಾಕ್ಷಿ  ಅಡಿ ಉದ್ಯಮದಾರರ ಅರ್ಜಿಗಳನ್ನು ಸ್ವಿಕರಿಸಿ ತ್ವರಿತವಾಗಿ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಪ್ರಸ್ತುತ ತೆಂಗು ಹಾಗೂ ನಾರು ಅಭಿವೃದ್ಧಿ ಮಂಡಳಿಗೆ ಹೊಸ ರೀತಿಯ ಕಾಯಕಲ್ಪಗಳನ್ನು ನೀಡಲಾಗುತ್ತಿದ್ದು. ಕೇರಳ ಹಾಗೂ ತಮಿಳುನಾಡಿನ ಮಾದರಿಯಲ್ಲಿ ಮಂಡಳಿ ಲಾಭದಾಯಕವಾಗುವಂತೆ ಮಾಡಲಾಗುವುದು.

ಮಹಾನಗರ ಪಾಲಿಕೆಗೆ ಸಂಬಂಧ ಪಟ್ಟಂತೆ ಬಾಕಿ ಇರುವ ಕರ ಪಾವತಿ ಬಗ್ಗೆ ಆದಷ್ಟು ಬೇಗ ಮುಖ್ಯಮಂತ್ರಿಗಳು, ನಗರಾಭಿವೃದ್ಧಿ ಸಚಿವರು, ವಿವಿಧ ನಿಗಮ ಮಂಡಳಿ, ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷರು, ವಿವಿಧ ಇಲಾಖೆಗಳ ಕಾರ್ಯದರ್ಶಿಗಳನ್ನು ಕೂಡಿಸಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು. ಇಲಾಖೆಯಲ್ಲಿನ ಅನುದಾನದ ಲಭ್ಯತೆಯನ್ನು ಗಮನಿಸಿ ಗೋಕುಲ ರಸ್ತೆಯ ಕೈಗಾರಿಕಾ ಪ್ರದೇಶದ ೧೫ ಕೋಟಿ ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಅನುದಾನ ನೀಡಲಾಗುವುದು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿಗಳು ಹಾಗೂ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕರಾದ ಜಗದೀಶ್ ಶಟ್ಟರ್ ಅಧ್ಯಕ್ಷತೆ ವಹಸಿ ಮಾತನಾಡಿದರು. ಹುಬ್ಬಳ್ಳಿ ಧಾರವಾಡ ಪೂರ್ವ ಕ್ಷೇತ್ರದ ಶಾಸಕ ಅಬ್ಬಯ್ಯ ಪ್ರಸಾದ್, ಪಾಲಿಕೆ ಸದಸ್ಯ ಮಹೇಶ್ ಬುರಲಿ, ಕಾಸಿಯಾ(ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ) ಅಧ್ಯಕ್ಷ ಬಸವರಾಜ ಜವಳಿ, ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷರಾದ ವಿಶ್ವನಾಥ ಗೌಡರ, ಸೇರಿದಂತೆ ಇತರೆ ಉದ್ಯಮಿಗಳು, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ