ಇಂದು ಪಾಕ್​ ಸಾರ್ವತ್ರಿಕ ಚುನಾವಣೆ:  ಆತಂಕ, ಭಯದ ಮಧ್ಯೆಯೇ ಮತದಾನ

ಇಸ್ಲಾಮಾಬಾದ್​​: ಬೆಳಗ್ಗೆ 8 ಗಂಟೆಯಿಂದ ಆರಂಭವಾದ ಮತದಾನ ಸಂಜೆ 6 ಗಂಟೆವರೆಗೆ ನಡೆಯಲಿದೆ. ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಮತ ಎಣಿಕೆ ಶುರುವಾಗಲಿದೆ. ಮಧ್ಯರಾತ್ರಿ ವೇಳೆಗೆ ಆ ದೇಶದ ನೂತನ ಪ್ರಧಾನಿ ಹೊರಹೊಮ್ಮಲಿದ್ದಾನೆ….
ಇದು 71 ವರ್ಷಗಳ ಇತಿಹಾಸ ಹೊಂದಿರುವ ಪಾಕಿಸ್ತಾನದ ಎರಡನೇ ಚುನಾಯಿತ ಸರ್ಕಾರಕ್ಕೆ ನಡೆಯುತ್ತಿರುವ ಚುನಾವಣೆಯ ಝಲಕ್​ನ ಮುನ್ನೋಟ​​…
ಹೌದು, ಮದ್ದು ಗುಂಡುಗಳು ಹಾಗೂ ಬಂದೂಕಿನ ಸದ್ದಿನೊಂದಿಗೆ ಹರಿದ ರಕ್ತಪಾತದ ನಡುವೆ ನೆರೆರಾಷ್ಟ್ರ ಪಾಕಿಸ್ತಾನ ಇಂದು ಸಾರ್ವತ್ರಿಕ ಚುನಾವಣೆಗೆ ಸಜ್ಜಾಗಿದೆ. ಪಾಕಿಸ್ತಾನ ಸಂಸತ್​ ಹಾಗೂ ಪ್ರಾಂತ್ಯ ರಾಜ್ಯಗಳ ವಿಧಾನಸಭೆಯ ಒಟ್ಟು 849 ಸ್ಥಾನಗಳಿಗೆ ಮತದಾನ ನಡೆಯಲಿದೆ. ಪ್ರಧಾನಿ ಹುದ್ದೆ ಮೇಲೆ ಕಣ್ಣಿಟ್ಟಿರುವ ಮೂರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಸೇರಿದಂತೆ 12,570 ಕ್ಕೂ ಅಧಿಕ ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.
ಆತಂಕ, ಭಯದ ಮಧ್ಯೆ ಭಾರಿ ಬಿಗಿ ಭದ್ರತೆ…. 
ಪಾಕಿಸ್ತಾನ ಸಾರ್ವತ್ರಿಕ ಚುನಾವಣೆ ಘೋಷಣೆ ಆಗುತ್ತಿದ್ದಂತೆ ದೇಶದ ಅನೇಕ ಕಡೆ ರಕ್ತದ ಹೊಳೆ ಹರಿದಿತ್ತು. ಬಾಂಬ್​ ಹಾಗೂ ಗುಂಡಿನ ದಾಳಿಗಳಿಗೆ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಅಭ್ಯರ್ಥಿಗಳು ಸೇರಿದಂತೆ ಹಲವು ಅಮಾಯಕ ಪ್ರಜೆಗಳು ಬಲಿಯಾಗಿದ್ದರು. ಇದರಿಂದ ದೇಶಾದ್ಯಂತ ಆತಂಕ, ಭಯದ ವಾತಾವರಣವೇ ಆವರಿಸಿದೆ. ಹೀಗಾಗಿ ದೇಶದೆಲ್ಲೆಡೆ ಬಿಗಿ ಬಂದೋಬಸ್ತ್​ ಕೈಗೊಳ್ಳಲಾಗಿದೆ.
ರಾಷ್ಟ್ರೀಯ ವಿಧಾನಸಭೆ (ಸಂಸತ್)ಯ 342 ಸ್ಥಾನಗಳು ಹಾಗೂ ಪ್ರಾಂತೀಯ ವಿಧಾನಸಭೆಯ 577 ಸ್ಥಾನಗಳಿಗೆ ಪಾಕ್​ ಜನತೆ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಒಟ್ಟು ಎಲ್ಲಾ ಕ್ಷೇತ್ರಗಳಲ್ಲಿ 100ಕ್ಕೂ ಹೆಚ್ಚು ಪಕ್ಷಗಳ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
ಮಾಜಿ ಕ್ರಿಕೆಟಿಗ ಇಮ್ರಾನ್‌ ಖಾನ್‌ ನೇತೃತ್ವದ ಪಾಕಿಸ್ತಾನ್‌ ತೆಹ್ರೀಕ್‌-ಇ-ಇನ್ಸಾಫ್‌, ಮಾಜಿ ಪ್ರಧಾನಿ ನವಾಜ್​ ಷರೀಫ್​ ಕುಟುಂಬದ ನೇತೃತ್ವದ ಪಾಕಿಸ್ತಾನ್‌ ಮುಸ್ಲಿಂ ಲೀಗ್‌-ನವಾಜ್‌ ಹಾಗೂ ಭುಟ್ಟೊ ಕುಟುಂಬದ ಪಾಕಿಸ್ತಾನ ಪೀಪಲ್ಸ್‌ ಪಾರ್ಟಿ ಪ್ರಮುಖ ಪಕ್ಷಗಳಾಗಿವೆ. ಮತದಾನಕ್ಕೆ 85 ಸಾವಿರ ಮತಗಟ್ಟೆಗಳನ್ನು ತೆರೆಯಾಲಾಗಿದ್ದು, 3,71,388 ಭದ್ರತಾ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ