ಪಾಕ್​ ಚುನಾವಣೆ: ಮೊದಲ ಬಾರಿಗೆ ಅಗ್ನಿ ಪರೀಕ್ಷೆಗಿಳಿದ ಹಿಂದೂ ಮಹಿಳೆ!

ಇಸ್ಲಾಮಾಬಾದ್​​: ಇಂದು ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು, ಅಲ್ಲಿನ ಹಿಂದೂಗಳ ಪಾಲಿಗೆ ಮಹತ್ವದ ದಿನವಾಗಿದೆ. ಇದೇ ಮೊದಲ ಬಾರಿಗೆ ಹಿಂದೂ ಮಹಿಳೆವೋರ್ವರು ಚುನಾವಣಾ ಕಣದ ಅಗ್ನಿ ಪರೀಕ್ಷೆ ಎದುರಿಸುತ್ತಿದ್ದಾರೆ.
ಸಿಂಧ್​ ಪ್ರಾಂತ್ಯದ ಹಿಂದೂ ಮಹಿಳೆ ಸುನೀತಾ ಪರ್ಮಾರ್ (31)​ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಈ ಮೂಲಕ ಪಾಕಿಸ್ತಾನ ಚುನಾವಣೆಗೆ ಧುಮುಕಿರುವ ಪ್ರಪ್ರಥಮ ಹಿಂದೂ ಮಹಿಳೆ ಸುನೀತಾ ಆಗಿದ್ದಾರೆ.
ಇಲ್ಲಿನ ತಾರ್ಪಾರ್ಕಾರ್​ ಜಿಲ್ಲೆಯ ಅತ್ಯಧಿಕ ಹಿಂದೂಗಳನ್ನು ಹೊಂದಿದ್ದು, ಸಿಂಧ್ ವಿಧಾನಸಭಾ ಕ್ಷೇತ್ರದ ಪಿಎಸ್​​-56ರಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸುನೀತಾ ಸ್ಪರ್ಧಿಸುತ್ತಿದ್ದಾರೆ. ಮಹಿಳೆಯರಿಗೆ ಶಿಕ್ಷಣ ಹಾಗೂ ಉತ್ತಮ ಆರೋಗ್ಯ ಕಲ್ಪಿಸುವುದು ಸುನೀತಾರ ಪ್ರಮುಖ ಅಜೆಂಡಾವಾಗಿದ್ದು, ಇದೇ ಉದ್ದೇಶದಿಂದ ಚುನಾವಣೆ ಎದುರಿಸುತ್ತಿದ್ದಾರೆ.
ಹಿಂದುಳಿದ ಸಮುದಾಯಕ್ಕೆ ಸೇರಿರುವ ಸುನೀತಾ, ಚುನಾವಣೆಯಲ್ಲಿ ಗೆಲ್ಲುವ ಮೂಲಕ ಹೊಸ ಇತಿಹಾಸ ಬರೆಯಲು ಸಜ್ಜಾಗಿದ್ದಾರೆ. ಈ ಹಿಂದೆ ಪಾಕಿಸ್ತಾನದ ಇತಿಹಾಸದಲ್ಲೇ ಮೊದಲ ಬಾರಿಗೆ ಕೃಷ್ಣಾ ಕುಮಾರಿ ಕೊಲ್ಹಿ ಎಂಬುವರು ಸೆನೆಟ್‌ಗೆ ಆಯ್ಕೆಯಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ಕಳೆದ ವರ್ಷವಷ್ಟೇ ಕೃಷ್ಣಾ ಕುಮಾರಿ ಮೀಸಲು ಕ್ಷೇತ್ರದಿಂದ ಪಾಕ್​ ಸೆನೆಟ್​ಗೆ ನೇಮಕವಾಗಿದ್ದರು.
ಇದರ ಬೆನ್ನಲ್ಲೇ ಇದೀಗ ಮತ್ತೋರ್ವ ಹಿಂದೂ ಮಹಿಳೆ ಸುನೀತಾ ಪರ್ಮಾರ್ ಚುನಾವಣೆಗೆ ಧುಮುಕಿದ್ದು, ಇದು ಹಿಂದೂಗಳ ಪಾಲಿಗೆ ಮಹತ್ವ ಎನ್ನಿಸಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ