ನವದೆಹಲಿ, ಜು.21-ಮಕ್ಕಳ ಅಕ್ರಮ ದತ್ತು ನೀಡಿಕೆ ಹಾಗೂ ಕಳ್ಳಸಾಗಣೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಮಿಷನರಿ ಆಫ್ ಚಾರಿಟಿ(ಎಂಒಸಿ) ನಡೆಸುತ್ತಿರುವ ಎಲ್ಲ ಅನಾಥಾಶ್ರಮಗಳು ಮತ್ತು ಬಾಲಾಶ್ರಮಗಳ ಮೇಲೆ ತೀವ್ರ ನಿಗಾ ಇಟ್ಟಿದೆ.
ಈ ಕೂಡಲೇ ಎಲ್ಲ ಅನಾಥಾಶ್ರಮಗಳ ತಪಾಸಣೆಗಾಗಿ ಸೂಚನೆಗಳನ್ನು ನೀಡುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ನಿರ್ದೇಶನ ನೀಡಿದೆ.
ಅಕ್ರಮ ಮತ್ತು ಅನಧಿಕೃತ ಚಟುವಟಿಕೆಗಳಲ್ಲಿ ತೊಡಗಿರುವ ಇಂಥ ಎಲ್ಲ ಸಂಸ್ಥೆಗಳನ್ನು ಗುರುತಿಸುವಂತೆಯೂ ಸಚಿವಾಲಯ ಸೂಚಿಸಿದೆ. ಅಕ್ರಮ ಚಟುವಟಿಕೆಗಳು, ಮಕ್ಕಳ ಮಾರಾಟ-ಕಳ್ಳಸಾಗಣೆ, ಅಕ್ರಮ ದತ್ತು ಸ್ವೀಕಾರ ಕೃತ್ಯಗಳು ನಡೆಯಬಹುದಾದ ಸ್ಥಳಗಳು, ಅನಾಥಾಶ್ರಮಗಳು, ಬಾಲಾಲಯಗಳು, ಹೆರಿಗೆ ಆಸ್ಪತ್ರೆಗಳು ಹಾಗೂ ಇತರ ಮಕ್ಕಳ ಕೇಂದ್ರಗಳ ಮೇಲೆ ನಿಗಾ ಇಡುವಂತೆಯೂ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಲಾಗಿದೆ. ದೇಶದ ಕೆಲವೆಡೆ ಎಂಒಸಿ ಅನಾಥಾಶ್ರಮಗಳಲ್ಲಿ ಮಕ್ಕಳ ಅಕ್ರಮ ದತ್ತು ನೀಡಿಕೆ ಮತ್ತು ಮಾರಾಟ ಪ್ರಕರಣಗಳಿಂದ ಎಚ್ಚೆತುಕೊಂಡಿರುವ ಕೇಂದ್ರ ಸರ್ಕಾರ ಇಂಥ ಘಟನೆಗಳು ಮರುಕಳಿಸದಂತೆ ಕಟ್ಟೆಚ್ಚರ ವಹಿಸಿದೆ.