ಸ್ಫೋಟಕಗಳಿದ್ದ ಪಾಲಿಥಿನ್ ಚೀಲ ಎಸೆದ ಕೋತಿಗಳು

ಕಾನ್ಪುರ, ಜು.21- ಮಂಗಗಳು ಕೀಟಲೆಗಳಿಗೆ ಹೆಸರುವಾಸಿ. ಆದರೆ, ಈ ಕೀಟಲೆ ಬುದ್ಧಿಯಿಂದ ಹಲವು ಬಾರಿ ಮನುಷ್ಯರು ತೊಂದರೆಗೆ ಒಳಗಾಗುವ ಪ್ರಸಂಗಗಳು ಸಾಕಷ್ಟಿವೆ. ಇಂತಹ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ. ಕೋತಿಗಳು ಸ್ಫೋಟಕಗಳಿದ್ದ ಪಾಲಿಥಿನ್ ಚೀಲವನ್ನು ಜನವಸತಿ ಪ್ರದೇಶದಲ್ಲಿ ಎಸೆದ ಪರಿಣಾಮ ಹಲವರು ಗಂಭೀರವಾಗಿ ಗಾಯಗೊಂಡ ಘಟನೆ ಫತೇಪುರದಲ್ಲಿ ನಡೆದಿದೆ. ಮನು ಕಾ ಪುರ್ವಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮಗು ಸೇರಿದಂತೆ ಗಾಯಗೊಂಡಿರುವ ಹಲವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಕೋತಿಗಳು ಎಲ್ಲಿಂದಲೋ ಎತ್ತಿಕೊಂಡು ಬಂದ ಕವರ್‍ನಲ್ಲಿ ಯಾವುದಾದರೂ ವಸ್ತುವಿಗೆ ತಾಗಿದಾಗ ಸ್ಫೋಟಗೊಳ್ಳುವಂಥ ಬಾಂಬ್ ರೀತಿಯ ಸ್ಫೋಟಕ ವಸ್ತುವಿತ್ತು. ಅದರೊಂದಿಗೆ ಮನೆಯ ತಾರಸಿ ಮೇಲೆ ಆಟವಾಡುತ್ತಿದ್ದ ಮಂಗಗಳು ಆಕಸ್ಮಿಕವಾಗಿ ಅದನ್ನು ಮನೆಯ ಹೊರಭಾಗದಲ್ಲಿ ಶಾಲಾ ಬಸ್‍ಗಾಗಿ ಕಾಯುತ್ತಿದ್ದ ಗುಲಾಬ್ ಗುಪ್ತಾ (60) ಮತ್ತು ಅವರ ಐದು ವರ್ಷದ ಮೊಮ್ಮಗ ಸಾಮ್ರಾಟ್ ಮೇಲೆ ಎಸೆದಿವೆ. ಸಾಮ್ರಾಟ್‍ಗೆ ಹೆಚ್ಚಿನ ಗಾಯಗಳಾಗಿದ್ದು, ಆತನ ಅಜ್ಜ ಮತ್ತು ಪಕ್ಕದಲ್ಲಿ ಹಾದು ಹೋಗುತ್ತಿದ್ದ ಕೆಲವು ದಾರಿಹೋಕರಿಗೂ ಗಾಯಗಳಾಗಿವೆ. ಗಾಯಗೊಂಡವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ