ಬೆಂಗಳೂರು, ಜು.7- ರೈತರ ಸಾಲ ಮನ್ನಾದಿಂದ ಒಕ್ಕಲಿಗ ಸಮುದಾಯಕ್ಕೆ ಹೆಚ್ಚು ಲಾಭವಾಗುತ್ತದೆ ಎಂಬ ಲೆಕ್ಕಾಚಾರವೇ ಪ್ರಜ್ಞಾ ರಹಿತವಾದದ್ದು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜೆಟ್ ಮೇಲೆ ನಡೆಯುತ್ತಿರುವ ಚರ್ಚೆಗಳಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಉತ್ತರ ಕೊಡುತ್ತಾರೆ.ನಾನು ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನನ್ನನ್ನು ಪ್ರಶ್ನೆ ಕೇಳುತ್ತಿರುವ ಹಿನ್ನೆಲೆ ಅರ್ಥವಾಗುತ್ತದೆ.ಸಾಲ ಮನ್ನಾದಿಂದ ಶೇ.34ರಷ್ಟು ಒಕ್ಕಲಿಗ ಸಮುದಾಯಕ್ಕೆ ಲಾಭವಾಗುತ್ತದೆ ಎಂಬ ಲೆಕ್ಕಾಚಾರ ಯಾವ ಮಹಾನುಭಾವ ಮಾಡಿದನೋ ಗೊತ್ತಿಲ್ಲ. ಹಳೇ ಮೈಸೂರು ಭಾಗದ ನಾಲ್ಕೈದು ಜಿಲ್ಲೆಗಳಲ್ಲಿ ಒಕ್ಕಲಿಗ ಸಮುದಾಯವಿದೆ. ಮಂಗಳೂರು, ಬೀದರ್ ಅಲ್ಲೆಲ್ಲಾ ಬರಿ ಒಕ್ಕಲಿಗರಿದ್ದಾರೆಯೇ ?ಪ್ರಜ್ಞಾರಹಿತವಾಗಿ ಲೆಕ್ಕಾಚಾರ ಹಾಕಿ ಆರೋಪ ಮಾಡುವುದು ಸರಿಯಲ್ಲ. ಅದರ ಹಿನ್ನೆಲೆ ಏನೆಂದು ನನಗೆ ಗೊತ್ತಿದೆ ಎಂದರು.
ಬಜೆಟ್ ಮೇಲೆ ವಿಧಾನಸಭೆಯಲ್ಲಿ ಇನ್ನೂ ಚರ್ಚೆ ನಡೆಯುತ್ತಿದೆ.ಅಂತಿಮವಾಗಿ ಉತ್ತರ ನೀಡಬೇಕಾದರೆ ಮುಖ್ಯಮಂತ್ರಿಯವರು ಎಲ್ಲಕ್ಕೂ ಸರಿಯಾದ ಸ್ಪಷ್ಟನೆ ಕೊಡುತ್ತಾರೆ ಎಂದರು.
ಉತ್ತರ ಕರ್ನಾಟಕ ಭಾಗಕ್ಕೆ ಯಾವುದೇ ಲಾಭವಾಗಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಗೌಡರು, ಈ ಮೊದಲು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಮಂಡಿಸಿದ್ದ ಬಜೆಟ್‍ನಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಕೊಡುಗೆಗಳನ್ನು ನೀಡಿದ್ದಾರೆ. ಅವು ಮುಂದುವರೆಯುತ್ತವೆ ಎಂದು ಕುಮಾರಸ್ವಾಮಿ ತಮ್ಮ ಬಜೆಟ್‍ನಲ್ಲಿ ಹೇಳಿದ್ದಾರೆ.ಇನ್ನು ಅನ್ಯಾಯವಾಗುವುದು ಹೇಗೆ ಎಂದು ಪ್ರಶ್ನಿಸಿದರು.
ಕೆಲವು ಕಾಂಗ್ರೆಸ್ ಮುಖಂಡರು ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಗೌಡರು, ಅವೆಲ್ಲವಕ್ಕೂ ಎಚ್.ಡಿ.ಕುಮಾರಸ್ವಾಮಿ ಅವರೇ ಉತ್ತರ ನೀಡುತ್ತಾರೆ ಎಂದು ಹೇಳಿದರು.