ಮಾಜಿ ಪ್ರಧಾನಿಯಿಂದ ಮೌನವೃತ

Deve Gowda

 

ಬೆಂಗಳೂರು, ಜು.7- ಸದ್ಯದ ರಾಜಕೀಯ ಪರಿಸ್ಥಿತಿಯ ಬಗ್ಗೆ ನಾನು ಏನನ್ನೂ ಮಾತನಾಡುವುದಿಲ್ಲ. ಮಾತನಾಡುವ ಸಂದರ್ಭ ಬಂದಾಗ ಮೌನ ಮುರಿಯುತ್ತೇನೆ. ಆಗ ಪತ್ರಕರ್ತರ ಮುಂದೆಯೇ ಬಂದು ಏನು ಹೇಳಬೇಕೋ ಅದನ್ನು ಹೇಳುತ್ತೇನೆ ಎಂದು ಹೇಳುವ ಮೂಲಕ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕುತೂಹಲ ಕೆರಳಿಸಿದ್ದಾರೆ.
ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆಯಲ್ಲಿ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಸದ್ಯದ ರಾಜಕೀಯ ಪರಿಸ್ಥಿತಿ ಬಗ್ಗೆ ಏನನ್ನೂ ಮಾತನಾಡಬಾರದು ಎಂಬ ನಿರ್ಧಾರಕ್ಕೆ ಬಂದಿದ್ದೇನೆ. ಹಾಗಾಗಿ ನಾನು ಈಗ ಹೆಚ್ಚು ಮಾತನಾಡುವುದಿಲ್ಲ. ಮುಂದಿನ ದಿನಗಳಲ್ಲಿ ಮಾತನಾಡುವ ಸಂದರ್ಭ ಬರಬಹುದು.ಆಗ ಪತ್ರಿಕಾಗೋಷ್ಠಿಯಲ್ಲಿಯೇ ಮಾತನಾಡುತ್ತೇನೆ. ಮೌನ ಮುರಿಯುವುದು ಯಾವ ದಿನ ಎಂಬುದು ಇನ್ನೂ ತೀರ್ಮಾನವಾಗಿಲ್ಲ ಎಂದರು.
ಪತ್ರಕರ್ತರು ನಿರ್ಭಯವಾಗಿ ಕೆಲಸ ಮಾಡುವ ವಾತಾವರಣ ಇಲ್ಲ. ಅನೇಕ ಒತ್ತಡಗಳಿವೆ. ಇದರ ಬಗ್ಗೆ ನನಗೆ ಚೆನ್ನಾಗಿ ಅರಿವಿದೆ ಎಂದು ಗೌಡರು ಹೇಳಿದರು.
ಸಾಹಿತಿ ಬರಗೂರು ರಾಮಚಂದ್ರಪ್ಪ, ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಸಿದ್ದರಾಜು, ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿಬಾಯಿ, ಅಂಕಣಕಾರ ದಿನೇಶ್‍ಅಮಿನ್‍ಮಟ್ಟು, ಕನ್ನಡಪ್ರಭ ಸಂಪಾದಕ ರವಿಹೆಗಡೆ, ಪ್ರೆಸ್‍ಕ್ಲಬ್‍ನ ಅಧ್ಯಕ್ಷ ಸದಾಶಿವಶೆಣೈ, ಕಾರ್ಯದರ್ಶಿ ಕಿರಣ್ ಹಾಗೂ ಕ್ಲಬ್‍ನ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಪ್ರೆಸ್‍ಕ್ಲಬ್ ಆಯೋಜಿಸಿದ್ದ ವಿಧಾನಸಭೆ ಚುನಾವಣೆ ಫಲಿತಾಂಶ ಕುರಿತ ಕ್ವಿಜ್ ವಿಜೇತರಿಗೆ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಇದೇ ವೇಳೆ ಬಹುಮಾನ ವಿತರಿಸಲಾಯಿತು.
ಕ್ಲಬ್‍ನ ಹಿರಿಯ ಸದಸ್ಯರಾದ ಸೋಮಸುಂದರ ರೆಡ್ಡಿ ಪ್ರಥಮ, ಅಪ್ಸಾನಾ ಜಾಸ್ಮಿನ್ ಮತ್ತು ಪಿ.ಎಸ್.ನಾಯ್ಡು ದ್ವಿತೀಯ ಬಹುಮಾನ ಹಂಚಿಕೊಂಡರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ