ಸರ್ಕಾರದ ಇಂಗ್ಲಿಷ್ ಶಾಲೆ ಆರಂಭಕ್ಕೆ ಆರಂಭದಲ್ಲೇ ವಿಘ್ನ

 

ಬೆಂಗಳೂರು, ಜು.7- ಬಜೆಟ್‍ನಲ್ಲಿ ತಿಳಿಸಿದಂತೆ ರಾಜ್ಯದಲ್ಲಿ ಒಂದು ಸಾವಿರ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆಯಬಾರದು ಹಾಗೂ 28,847 ಶಾಲೆಗಳನ್ನು ವಿಲೀನಗೊಳಿಸುವುದನ್ನು ಕೈ ಬಿಡುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ತಿಳಿಸಿದ್ದಾರೆ.
ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಹಿರಿಯ ಸಾಹಿತಿಗಳು ಹಾಗೂ ಚಿಂತಕರ ಸಭೆಯ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಇತ್ತೀಚೆಗೆ ಮಂಡನೆಯಾದ ಸಮ್ಮಿಶ್ರ ಸರ್ಕಾರದ ಬಜೆಟ್‍ನಲ್ಲಿ ಒಂದು ಸಾವಿರ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆಯುವುದಾಗಿ ಹಾಗೂ 28,847 ಶಾಲೆಗಳನ್ನು ವಿಲೀನಗೊಳಿಸುವ ಬಗ್ಗೆ ಪ್ರಕಟಿಸಲಾಗಿತ್ತು. ಈ ವಿಚಾರ ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಪ್ರಾಥಮಿಕ ಹಂತದಲ್ಲಿ ಕನ್ನಡ ಶಾಲೆಗಳನ್ನು ಉಳಿಸುವ ಅಗತ್ಯವಿದೆ.ಅದರಲ್ಲೂ ಗ್ರಾಮೀಣ ಭಾಗದ ಹೆಣ್ಣುಮಕ್ಕಳು, ಕೊಳಗೇರಿಗಳ ಮಕ್ಕಳು ಶಿಕ್ಷಣದಿಂದ ವಂಚಿತರಾಗದಿರಲು ಶಾಲೆಗಳ ವಿಲೀನದಿಂದ ತೊಂದರೆಯಾಗುವ ಸಾಧ್ಯತೆ ಇದೆ.ಈಗ ವಿಲೀನ ಎಂದು ಹೇಳಿ ಮುಂದೆ ಶಾಲೆಯನ್ನೇ ಮುಚ್ಚುವ ಸೂಚನೆ ಇದಾಗಿದೆ ಎಂದು ಆಕ್ಷೇಪಿಸಿದರು.
ಶಾಲೆಗಳಲ್ಲಿ ದಂಧೆಗಳೇ ಶುರುವಾಗಿದೆ.ಕಾನೂನನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಪಾಲಿಸಿದರೆ ಸಾಕಷ್ಟು ಸುಧಾರಣೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಇಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದ್ದೇವೆ ಎಂದು ತಿಳಿಸಿದರು.
ಸಭೆಯಲ್ಲಿ ಹಿರಿಯ ಸ್ವತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಹಿರಿಯ ಸಾಹಿತಿಗಳಾದ ಚಂಪಾ, ಚಂದ್ರಶೇಖರ ಕಂಬಾರ, ವಸುಂದರಾ ಭೂಪತಿ, ಮುಖ್ಯಮಂತ್ರಿ ಚಂದ್ರು ಮತ್ತಿತರರು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ