ಬೆಂಗಳೂರು, ಜೂ.21- ಆರೋಗ್ಯ ತಪಾಸಣೆಗಾಗಿ ಸಿದ್ದಗಂಗಾ ಶ್ರೀಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಭಕ್ತರು ಯಾವುದೇ ರೀತಿಯಲ್ಲೂ ಗಾಬರಿ ಬೀಳುವ ಅವಶ್ಯಕತೆ ಇಲ್ಲ. ವೈದ್ಯರು ಅವರ ವಯಸ್ಸು ,ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ನಗರದ ಬಿಜಿಎಸ್ ಆಸ್ಪತ್ರೆಗೆ ಭೇಟಿ ನೀಡಿ ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳ ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಶ್ರೀಗಳಿಗೆ ಉತ್ತಮ ರೀತಿಯ ಚಿಕಿತ್ಸೆ ನೀಡಲಾಗುತ್ತಿದೆ. ಆರೋಗ್ಯ ಸಂಬಂಧಿತ ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರನ್ನು ನೋಡಲು ಆಸ್ಪತ್ರೆಗೆ ಹೆಚ್ಚು ಮಂದಿ ಬಂದು ಇತರರಿಗೆ ತೊಂದರೆ ಕೊಡಬಾರದು ಎಂದರು.
ಸ್ವಾಮೀಜಿಗಳ ಮಾರ್ಗದರ್ಶನ ನಮ್ಮೆಲ್ಲರಿಗೂ ಅತ್ಯಗತ್ಯ. ರೈತರ ಪರವಾದ ಕಾಳಜಿ ಹೊಂದಿರುವ ಅವರ ಆರೋಗ್ಯ ಉತ್ತಮವಾಗಿದೆ. ವೈದ್ಯರ ಪರವಾಗಿ ನಾನೇ ಅದನ್ನು ಹೇಳುತ್ತೇನೆ. ಅವರಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದರು.
ನಾನು ಅವರನ್ನು ಭೇಟಿ ಮಾಡಿದ ಕೂಡಲೇ ಪ್ರಸಾದ ಸ್ವೀಕರಿಸಿದಿರಾ ಎಂದು ಕೇಳಿದರು. ಯಾರೇ ಹೋದರೂ ಅದೇ ರೀತಿ ವಿಚಾರಿಸುತ್ತಾರೆ. ಎಲ್ಲರೊಂದಿಗು ಸಹಜವಾಗಿ ಮಾತನಾಡುತ್ತಾರೆ ಎಂದರು.






