ಕಸವಿಲೇವಾರಿ ವಿಷಯದಲ್ಲಿ ಮಾಫಿಯಾ ಕೆಲಸ ಮಾಡುತ್ತಿದ್ದರೆ ಮಟ್ಟ ಹಾಕಲಾಗುವುದು: ಡಾ.ಜಿ.ಪರಮೇಶ್ವರ್ ಎಚ್ಚರಿಕೆ

 

ಬೆಂಗಳೂರು,ಜೂ.21- ಬಿಬಿಎಂಪಿಯಲ್ಲಿ ಪೌರ-ಗುತ್ತಿಗೆ ಕಾರ್ಮಿಕರು ಅಥವಾ ಕಸವಿಲೇವಾರಿ ವಿಷಯದಲ್ಲಿ ಮಾಫಿಯಾಗಳು ಕೆಲಸ ಮಾಡುತ್ತಿದ್ದರೆ ಅದನ್ನು ಮುಲಾಜಿಲ್ಲದೆ ಮಟ್ಟ ಹಾಕಲಾಗುವುದು ಎಂದು ನಗರಾಭಿವೃದ್ದಿ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಎಚ್ಚರಿಕೆ ನೀಡಿದ್ದಾರೆ.
ಇಂದು ನಗರದ ವಿವಿಧೆಡೆ ಸಂಚರಿಸಿ ಅಭಿವೃದ್ದಿ ಕಾಮಗಾರಿಗಳ ಪರಿಶೀಲನೆ ನಡೆಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿಯಲ್ಲಿ ಬಾಕಿ ಉಳಿಸಿಕೊಂಡಿದ್ದ ಪೌರಕಾರ್ಮಿಕರ ವೇತನವನ್ನು ಪಾವತಿಸಲಾಗಿದೆ. ಇನ್ನು ಎಲೆಕ್ಟ್ರಿಕಲ್ ಕೆಲಸ ನಿರ್ವಹಿಸುವವರಿಗೆ ಬಾಕಿ ಪಾವತಿಸಬೇಕಿದೆ. ಅದನ್ನು ಶೀಘ್ರದಲ್ಲಿ ವ್ಯವಸ್ಥೆಗೊಳಿಸಲಾಗುವುದು. ಬಿಬಿಎಂಪಿಯಲ್ಲಿ ಯಾವುದೇ ಮಾಫಿಯಾ ಕೆಲಸ ಮಾಡುತ್ತಿದ್ದರೆ ಅದನ್ನು ತಡೆಗಟ್ಟುತ್ತೇವೆ ಎಂದರು.

ಫ್ರೀಡಂಪಾರ್ಕ್ ಬಳಿ ನಿರ್ಮಾಣ ಹಂತದಲ್ಲಿರುವ ಬಹುಮಹಡಿ ವಾಹನ ಪಾರ್ಕಿಂಗ್ ಕಟ್ಟಡದ ಪರಿಶೀಲನೆ ನಡೆಸಿದ ಅವರು, 24 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಿದ್ದರೂ ಬಂಡೆ ಅಡ್ಡ ಬಂದಿದ್ದರಿಂದ ಕಾಮಗಾರಿ ವಿಳಂಬವಾಗುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದರು.
ಮಾರ್ಚ್ ವೇಳೆಗೆ ಕಾಮಗಾರಿ ಪೂರ್ಣಗೊಳಿಸಿ ಕಟ್ಟಡದ ಸಂಪೂರ್ಣ ಬಳಕೆಗೆ ಮಾಡಿಕೊಡಲಾಗುವುದು ಎಂದು ಹೇಳಿದ್ದಾರೆ. 80 ಕೋಟಿ ರೂ. ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗುತ್ತಿದ್ದು, ಈ ಸಂಬಂಧ ಲಿಖಿತವಾಗಿ ಬಿಬಿಎಂಪಿ ಆಯುಕ್ತರಿಗೆ ಭರವಸೆ ನೀಡುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದೇನೆ ಎಂದು ವಿವರಿಸಿದರು.
ಜೆಸಿರಸ್ತೆಯಲ್ಲಿರುವ ಬಹುಮಹಡಿ ವಾಹನ ನಿಲ್ದಾಣ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಆದರೆ ನಗರದಲ್ಲಿ ಪಾರ್ಕಿಂಗ್ ಸಮಸ್ಯೆ ಹೆಚ್ಚಾಗಿದೆ. ರಸ್ತೆಗಳಲ್ಲೇ ವಾಹನ ನಿಲ್ಲಿಸುವುದರಿಂದ ಟ್ರಾಫಿಕ್ ಸಮಸ್ಯೆ ಉದ್ಭವಿಸುತ್ತದೆ. ಹೀಗಾಗಿ ಬಹುಮಹಡಿ ವಾಹನ ನಿಲುಗಡೆ ಕಟ್ಟಡಗಳು ಅತಿ ಉಪಯುಕ್ತ ಎಂದು ಅಭಿಪ್ರಾಯಪಟ್ಟರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ