ಸಿದ್ಧಗಂಗಾ ಮಠಾಧೀಶ ಡಾ. ಶಿವಕುಮಾರಸ್ವಾಮೀಜಿ ಬಿಜಿಎಸ್ ಆಸ್ಪತ್ರೆಗೆ ದಾಖಲು

 

ಬೆಂಗಳೂರು, ಜೂ.21- ನಡೆದಾಡುವ ದೇವರು, ತ್ರಿವಿಧ ದಾಸೋಹಿ ತುಮಕೂರಿನ ಸಿದ್ಧಗಂಗಾ ಮಠಾಧೀಶರಾದ ಡಾ.ಶ್ರೀ ಶಿವಕುಮಾರಸ್ವಾಮೀಜಿಯವರನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶತಾಯುಷಿಗಳಾದ ಸಿದ್ದಗಂಗಾ ಶ್ರೀಗಳಿಗೆ ಈಗಾಗಲೇ ಆರು ಸ್ಟಂಟ್‍ಗಳನ್ನು ಅಳವಡಿಸಲಾಗಿದೆ. ಕಳೆದ ಬಾರಿ ಅಳವಡಿಸಿದ್ದ ಸ್ಟಂಟ್ ಪರೀಕ್ಷಿಸಬೇಕಾಗಿರುವ ಹಿನ್ನೆಲೆಯಲ್ಲಿ ಸ್ವಾಮೀಜಿಯವರನ್ನು ಆಸ್ಪತ್ರೆಗೆ ಕರೆತರಲಾಗಿದೆ. ಯಾವುದೇ ರೀತಿಯ ಗಂಭೀರ ಸಮಸ್ಯೆ ಇಲ್ಲ ಎಂದು ಅವರ ಆಪ್ತ ವೈದ್ಯರಾದ ಡಾ.ಪರಮೇಶ್ವರ್ ತಿಳಿಸಿದ್ದಾರೆ.

ಶ್ರೀಗಳಿಗೆ ಅಳವಡಿಸಿರುವ ಸ್ಟಂಟ್ 3 ರಿಂದ 4 ತಿಂಗಳಷ್ಟೇ ಇರುವುದು. ಆಮೇಲೆ ಅದು ಬ್ಲಾಕ್ ಆಗುತ್ತದೆ. ಎಂಡೋಸ್ಕೋಪಿ ಮೂಲಕ ಪರೀಕ್ಷೆ ನಡೆಸಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ಶ್ರೀಗಳ ಆರೋಗ್ಯದಲ್ಲಿ ಗಂಭೀರ ಸಮಸ್ಯೆ ಏನೂ ಇಲ್ಲ, ಸಾಮಾನ್ಯವಾದ ಜ್ವರ, ಶೀತ, ಕೆಮ್ಮು ಇರುವುದರಿಂದ ಆಸ್ಪತ್ರೆಗೆ ಕರೆತರಲಾಗಿದ್ದು, ತಪಾಸಣೆ ನಡೆಸಲಾಗಿದೆ.

ಆರೋಗ್ಯದಲ್ಲಿ ಅಂತಹ ಏರುಪೇರು ಏನು ಕಂಡುಬಂದಿಲ್ಲ. ಬೆಳಿಗ್ಗೆ ಪೂಜೆ ಮುಗಿಸಿಕೊಂಡು ಬಂದ ಶ್ರೀಗಳು ತಪಾಸಣೆ ಮಧ್ಯದಲ್ಲೇ ಮಧ್ಯಾಹ್ನದ ಪೂಜೆಯನ್ನು ಶಿಷ್ಯರ ಸಹಾಯದಿಂದ ಆಸ್ಪತ್ರೆಯಲ್ಲಿಯೇ ನೆರವೇರಿಸಿದರು.
ಎಲ್ಲ ತಪಾಸಣೆಗಳು ಮುಗಿದು ಚೇತರಿಸಿಕೊಂಡರೆ ಇಂದು ಸಂಜೆ ಶ್ರೀಮಠಕ್ಕೆ ತೆರಳುವ ಸಾಧ್ಯತೆ ಇದೆ. ಅಗತ್ಯಬಿದ್ದರೆ ಇಲ್ಲಿಯೇ ಚಿಕಿತ್ಸೆ ಮುಂದುವರೆಯಲಿದೆ, ಯಾವುದೇ ಗಾಬರಿ ಪಡುವ ಅಗತ್ಯವಿಲ್ಲ ಎಂದು ಅವರ ಆಪ್ತ ವೈದ್ಯರು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ