ಬೆಂಗಳೂರು:ಜೂ-2: ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಕೂಡ ಬಿಜೆಪಿಯನ್ನು ಸೋಲಿಸಲು ಜೆಡಿಎಸ್ ಜೊತೆ ಕೈಜೋಡಿಸಲು ಕಾಂಗ್ರೆಸ್ ಮುಂದಾಗಿದೆ. ಚುನಾವಣೋತ್ತರ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ಲೋಕಸಭೆ ಚುನಾವಣೆಗೆ ಸ್ಥಳೀಯ ಪಕ್ಷಗಳನ್ನು ಒಗ್ಗೂಡಿಸಲು ಕರ್ನಾಟಕ ರಾಜಕೀಯವನ್ನು ವೇದಿಕೆಯನ್ನಾಗಿ ಬಳಸಿಕೊಳ್ಳಲು ನಿರ್ಧರಿಸಿದೆ.
ಈ ಹಿನ್ನಲೆಯಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿಯನ್ನು ಯಶಸ್ವಿಗೊಳಿಸಲು ಕಾಂಗ್ರೆಸ್ ಉತ್ಸುಕವಾಗಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಯಶಸ್ವಿಗೊಂಡರೆ ಬೇರೆ ರಾಜ್ಯಗಳಲ್ಲಿ ಸ್ಥಳೀಯ ಪಕ್ಷಗಳಾದ ಟಿಡಿಪಿ, ಡಿಎಂಕೆ, ಟಿಆರ್ ಎಸ್, ಟಿಎಂಸಿ, ಎನ್ ಸಿಪಿ, ಎಸ್ ಪಿ ಮತ್ತು ಬಿಎಸ್ ಪಿ ಪಕ್ಷಗಳನ್ನು ಒಟ್ಟಿಗೆ ತರಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್ ದ್ದು. ಹಲವು ರಾಜ್ಯಗಳಲ್ಲಿ ಇತ್ತೀಚಿನ ಲೋಕಸಭೆ ಹಾಗೂ ವಿಧಾನಸಭೆ ಉಪ ಚುನಾವಣೆಗಳ ಫಲಿತಾಂಶಗಳಲ್ಲಿ ಬಿಜೆಪಿಯ ಸೋಲು ಕಾಂಗ್ರೆಸ್ ಗೆ ಇನ್ನಷ್ಟು ಚೈತನ್ಯ ತಂದಿದೆ.
ಜೆಡಿಎಸ್ ಗೆ ಮುಖ್ಯಮಂತ್ರಿ ಹುದ್ದೆಯನ್ನು ಬಿಟ್ಟುಕೊಡಲು ಕಾಂಗ್ರೆಸ್ ತೀರ್ಮಾನಿಸಿದ್ದರೂ ಕೂಡ ಮತ್ತು ಪ್ರಮುಖ ಖಾತೆಗಳಲ್ಲಿ ಕೆಲವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟರೂ ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಪಕ್ಷಕ್ಕೆ ಹೊಂದಾಣಿಕೆ ಮಾಡಿಕೊಳ್ಳುವುದು ಅನಿವಾರ್ಯ ಎಂಬ ತೀರ್ಮಾನದಲ್ಲಿ ಕಾಂಗ್ರೆಸ್ ಇದೆ. ದೇಶ ಮಟ್ಟದಲ್ಲಿ ಕಾಂಗ್ರೆಸ್ ಗೆ ಸದ್ಯದ ಮಟ್ಟಿಗೆ ಮೈತ್ರಿ ಸರ್ಕಾರ ಅನಿವಾರ್ಯವಾಗಿದೆ. ಮೈತ್ರಿ ಸರ್ಕಾರದ ಕಾರ್ಯವೈಖರಿಗೆ ಯಾವುದೇ ಧಕ್ಕೆಯುಂಟಾಗದಂತೆ ನೋಡಿಕೊಳ್ಳಲು ಜೆಡಿಎಸ್ ಜೊತೆ ಹೆಚ್ಚಿನ ಒತ್ತಡ ಮಾಡುವುದು ಬೇಡ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರೇ ಆದೇಶ ನೀಡಿದ್ದಾರೆ ಎನ್ನುತ್ತಾರೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್.
ಈ ಹಿನ್ನೆಲೆಯಲ್ಲಿ 2019ರ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಜೊತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ. ಸೀಟು ಹಂಚಿಕೆ ಮತ್ತು ಇತರ ವಿಷಯಗಳನ್ನು ಆಮೇಲೆ ನಿರ್ಧರಿಸಲಾಗುವುದು ಎಂದು ಅವರು ಹೇಳಿದರು.