ಇಂಧನ ಖಾತೆಗಾಗಿ ಜಟಾಪಟಿ ನಡೆದಿದೆ ಎಂಬುದು ಸುಳ್ಳು: ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸ್ಪಷ್ಟನೆ

ಬೆಂಗಳೂರು:ಜೂ-2: ಇಂಧನ ಖಾತೆಗಾಗಿ ಜಟಾಪಟಿ ನಡೆದಿದೆ ಎಂಬುದು ಸುಳ್ಳು. ಡಿ.ಕೆ.ಶಿವಕುಮಾರ್‌ ಮತ್ತು ರೇವಣ್ಣ ಇಬ್ಬರೂ ಇಂಧನ ಖಾತೆ ಕೇಳಿದ್ದರು, ಆದರೆ ಇಂಧನ ಖಾತೆಗಾಗಿ ಯಾವುದೇ ಜಟಾಪಟಿ ನಡೆದಿಲ್ಲ’ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು ಇಂಧನ ಖಾತೆಯನ್ನು ಡಿ.ಕೆ.ಶಿವಕುಮಾರ್‌ಗೆ ತಪ್ಪಿಸಲು ದೇವೇಗೌಡರು ಮಾಸ್ಟರ್‌ ಪ್ಲಾನ್‌ ಮಾಡಿದ್ದರೆಂಬುದು ಸುಳ್ಳು. ದೇವೇಗೌಡರು ಖಾತೆ ಹಂಚಿಕೆಯಲ್ಲಿ ಯಾವುದೇ ಹಸ್ತಕ್ಷೇಪ ಮಾಡಿಲ್ಲ. ಈ ಹಿಂದೆ ರೇವಣ್ಣ ಹಾಗೂ ಶಿವಕುಮಾರ್‌ ಕೂಡ ಇಂಧನ ಸಚಿವರಾಗಿದ್ದರು. ಹಾಗಾಗಿ ಇಂಧನ ಖಾತೆ ಬೇಕು ಎಂದು ಇಬ್ಬರೂ ಕೇಳಿದ್ದು ನಿಜ ಎಂದರು.

ಇನ್ನು ಹಣಕಾಸು ಖಾತೆಯನ್ನು ನಾನು ಕೇಳಿದ್ದು ನಿಜ. ಸಮ್ಮಿಶ್ರ ಸರ್ಕಾರದಲ್ಲಿ ಕೊಡು-ಕೊಳ್ಳುವಿಕೆ ನೀತಿಯನ್ವಯ ಖಾತೆ ಹಂಚಿಕೆಯಾಗಿದೆ. ಕಾವೇರಿ ನದಿ ಪ್ರಾಧಿಕಾರದ ಸಾಧಕ-ಬಾಧಕಗಳ ಬಗ್ಗೆ ಚರ್ಚೆಗೆ ಕಾನೂನು ತಜ್ಞರು ಮತ್ತು ಅಧಿಕಾರಿಗಳ ಸಭೆ ಕರೆದಿದ್ದೇನೆ. ಕಾವೇರಿ ನದಿ ಪ್ರಾಧಿಕಾರದ ಬಗ್ಗೆ ಕೇಂದ್ರ ಅಧಿಸೂಚನೆ ಹೊರಡಿಸಿದೆ. ಈ ಕುರಿತು ಚರ್ಚಿಸಿದ ಬಳಿಕ ರಾಜ್ಯ ಸರ್ಕಾರದ ನಿಲುವು ಪ್ರಕಟಿಸುತ್ತೇವೆ ಎಂದು ಹೇಳಿದರು.

ಹೊಸ ಸರ್ಕಾರ ಬಂದಿರುವುದರಿಂದ ಹೊಸ ಬಜೆಟ್‌ ಮಂಡಿಸಬೇಕು. ಜಂಟಿ ಅಧಿವೇಶನ ಕರೆಯಬೇಕು. ಮೂರು–ನಾಲ್ಕು ದಿನಗಳಲ್ಲಿ ಬಜೆಟ್‌ ಸಿದ್ಧತಾ ಸಭೆಗಳನ್ನು ನಡೆಸುತ್ತೇವೆ ಹಾಗೂ ಹಿಂದಿನ ಸರ್ಕಾರದ ಜನಪರ ಯೋಜನೆಗಳನ್ನು ಮುಂದುವರಿಸುತ್ತೇವೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ