ಐಪಿಎಲ್ ಬೆಟ್ಟಿಂಗ್ ಪ್ರಕರಣ: ಹೇಳಿಕೆ ದಾಖಲಿಸಲು ಪೊಲೀಸ್ ಠಾಣೆ ಮುಂದೆ ಹಾಜರಾದ ಬಾಲಿವುಡ್ ನಟ, ನಿರ್ಮಾಪಕ ಅರ್ಬಾಜ್ ಖಾನ್

ಥಾಣೆ:ಜೂ-2: ಐಪಿಎಲ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ದಾಖಲಿಸಲು ಬಾಲಿವುಡ್ ನಟ, ನಿರ್ಮಾಪಕ ಅರ್ಬಾಜ್ ಖಾನ್ ಪೊಲೀಸ್ ಠಾಣೆ ಮುಂದೆ ಹಾಜರಾಗಿದ್ದಾರೆ.

ಐಪಿಎಲ್ ಬೆಟ್ಟಿಂಗ್ ಆರೋಪಕ್ಕೆ ಸಂಬಂಧಪಟ್ಟಂತೆ ನಿನ್ನೆ ಥಾಣೆ ಪೊಲೀಸರು ಅರ್ಬಾಜ್ ಖಾನ್ ಗೆ ಸಮ್ಮನ್ಸ್ ಜಾರಿ ಮಾಡಿದ್ದರು. ಇತ್ತೀಚೆಗೆ ಮುಗಿದ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಬೆಟ್ಟಿಂಗ್ ಮಾಡುತ್ತಿದ್ದ ಆರೋಪಕ್ಕೆ ಸಂಬಂಧಪಟ್ಟಂತೆ ಬುಕ್ಕಿಯೊಬ್ಬನನ್ನು ಬಂಧಿಸಿರುವ ಹಿನ್ನೆಲೆಯಲ್ಲಿ ತನಿಖೆಗೆ ಹಾಜರಾಗುವಂತೆ ಅರ್ಬಾಸ್ ಖಾನ್ ಗೆ ಕಳುಹಿಸಿರುವ ಪತ್ರದಲ್ಲಿ ಪೊಲೀಸರು ಸೂಚನೆ ನೀಡಿದ್ದರು.

ಇಂದು ಬೆಳಗ್ಗೆ ಥಾಣೆ ಪೊಲೀಸ್ ಠಾಣೆಯ ಬಲತ್ಕಾರದಿಂದ ಹಣ ಸುಲಿಗೆ ವಿರೋಧಿ ಕೋಶದ ಮುಂದೆ ಅರ್ಬಾಜ್ ಖಾನ್ ಹೇಳಿಕೆ ನೀಡಲು ಹಾಜರಾದರು ಎಂದು ಅಪರಾಧ ವಿಭಾಗದ ಡಿಸಿಪಿ ಅಭಿಷೇಕ್ ತ್ರಿಮುಖೆ ತಿಳಿಸಿದ್ದಾರೆ.

ಕಳೆದ ಮೇ 15ರಂದು ಮುಂಬೈಯಲ್ಲಿ ಸೋನು ಜಲಾನ್ ಅಲಿಯಾಸ್ ಸೋನು ಮಲಾಡ್ ಹಾಗೂ ಇತರ ಮೂವರನ್ನು ಬಂಧಿಸುವ ಮೂಲಕ ಬೆಟ್ಟಿಂಗ್ ದಂಧೆಯನ್ನು ಪೊಲೀಸರು ಬೇಧಿಸಿದ್ದರು.ಈತನ ತನಿಖೆ ವೇಳೆ ಅರ್ಬಾಜ್ ಖಾನ್ ಜೊತೆಗಿನ ಸಂಬಂಧದ ಬಗ್ಗೆ ಬಾಯ್ಬಿಟ್ಟಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿ ಪ್ರದೀಪ್ ಶರ್ಮ ತಿಳಿಸಿದ್ದಾರೆ.

ಐಪಿಎಲ್ ಮ್ಯಾಚ್ ನಲ್ಲಿ ಅರ್ಬಾಜ್ ಖಾನ್ ಬೆಟ್ಟಿಂಗ್ ನಲ್ಲಿ ಭಾಗಿಯಾಗಿರುವ ಶಂಕೆಯಿದ್ದು ಅವರ ಬ್ಯಾಂಕ್ ವಹಿವಾಟುಗಳನ್ನು ತಪಾಸಣೆ ಮಾಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಈ ನಡುವೆ ಬೆಟ್ಟಿಂಗ್ ನಲ್ಲಿ ಅರ್ಬಾಜ್ ಖಾನ್ 2.80 ಕೋಟಿ ರೂಪಾಯಿ ನಷ್ಟ ಮಾಡಿಕೊಂಡಿದ್ದು ಜಲಾನ್ ಗೆ ಹಣ ನೀಡಿರಲಿಲ್ಲ. ಇದರಿಂದಾಗಿ ಬುಕ್ಕಿಗಳು ನಟನಿಗೆ ಬೆದರಿಕೆಯೊಡ್ಡುತ್ತಿದ್ದರು ಎಂದು ತನಿಖೆ ವೇಳೆ ತಿಳಿದುಬಂದಿದೆ ಎನ್ನಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ