ಬೆಂಗಳೂರಿನಲ್ಲಿ ಸಡಿಲಗೊಳ್ಳುತ್ತಿರುವ ಕಮಲದ ಬೇರುಗಳು: ಚಿಂತೆಗೀದಾದ ಬಿಜೆಪಿ ನಾಯಕರು

 

ಬೆಂಗಳೂರು ,ಜೂ.1-ಬಿಜೆಪಿಯ ಭದ್ರಕೋಟೆ ಎನಿಸಿದ್ದ ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕಮಲದ ಬೇರುಗಳು ಸಡಿಲಗೊಳ್ಳುತ್ತಿರುವುದು ಪಕ್ಷವನ್ನು ಚಿಂತೆಗೀಡು ಮಾಡಿದೆ.
ಮೊದಲಿನಿಂದಲೂ ಬೆಂಗಳೂರು ಬಿಜೆಪಿಯ ಭದ್ರಕೋಟೆ ಎನಿಸಿತ್ತು.ಸುಶಿಕ್ಷಿತರು, ವಿದ್ಯಾವಂತರು, ಮೇಲ್ವರ್ಗದವರು, ಐಟಿ-ಬಿಟಿ, ಖಾಸಗಿ ಕಂಪನಿಗಳ ನೌಕರರು, ಯುವಕರು, ಬೆರೆ ಬೇರೆ ರಾಜ್ಯಗಳಿಂದ ಬಂದು ಇಲ್ಲಿಯೇ ನೆಲೆಸಿರುವವರು ಬಿಜೆಪಿಯ ಸಾಂಪ್ರದಾಯಿಕ ಮತದಾರರು ಎನಿಸಿಕೊಂಡಿದ್ದರು.
ಆದರೆ ನಿನ್ನೆ ಪ್ರಕಟಗೊಂಡ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ, ಕಳೆದ ಮೇ 15ರಂದು ಪ್ರಕಟವಾದ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ ನಿರೀಕ್ಷಿತ ಗುರಿಯನ್ನು ತಲುಪವಲ್ಲಿ ವಿಫಲವಾಗಿದೆ.

ಒಟ್ಟು 27 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 11 ಗೆದ್ದಿದ್ದರೆ ಕಾಂಗ್ರೆಸ್ 14 ಹಾಗೂ ಜೆಡಿಎಸ್ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಬಿಜೆಪಿಯ ಈ ಕಳಪೆ ಪ್ರದರ್ಶನ ಮುಂಬರುವ ಎಲ್ಲ ಹಂತದ ಚುನಾವಣೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಬಿಜೆಪಿ 2013ರ ವಿಧಾನಸಭೆ ಚುನಾವಣೆಯಲ್ಲಿ ಮೂರು ಹೋಳಾಗಿತ್ತು. ಬಿಜೆಪಿ, ಕೆಜಿಪಿ ಹಾಗೂ ಬಿಎಸ್‍ಆರ್ ಪಕ್ಷಗಳು ಇದ್ದಾಗಲೂ ಬೆಂಗಳೂರಿನಲ್ಲಿ 12 ಸ್ಥಾನಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿತ್ತು. ವಿರೋಧ ಪಕ್ಷದವರು ಕೂಡ ಹೇಳುವಂತೆ ಬೆಂಗಳೂರು ಯಾವಾಗಲೂ ಬಿಜೆಪಿ ಹಾದಿಗೆ ಹೆಚ್ಚು ತ್ರಾಸದಾಯಕವಾಗಿರಲಿಲ್ಲ.

ಈಗ ಪ್ರಕಟಗೊಂಡಿರುವ ಫಲಿತಾಂಶವನ್ನು ಅವಲೋಕಿಸಿದರೆ ಬಿಜೆಪಿ ಬೇರುಗಳು ಸಡಿಲಗೊಂಡು ಕಾಂಗ್ರೆಸ್ ರಾಜಧಾನಿ ಮೇಲೆ ಹಿಡಿತ ಸಾಧಿಸಲು ಸನ್ನದ್ಧವಾಗುತ್ತಿರುವುದು ಸ್ಪಷ್ಟವಾಗುತ್ತಿದೆ.
ಬಿಜೆಪಿಯಲ್ಲಿ ಪ್ರಮುಖ ನಾಯಕರಾದ ಸಂಸದ ಅನಂತಕುಮಾರ್, ಡಿ.ವಿ.ಸದಾನಂದಗೌಡ, ವಿ.ಸೋಮಣ್ಣ , ಆರ್.ಅಶೋಕ್, ಪಿ.ಸಿ.ಮೋಹನ್,ಡಾ.ಅಶ್ವಥ್ ನಾರಾಯಣ, ಮುನಿರಾಜು ಸೇರಿದಂತೆ ಮತ್ತಿತರ ಒಂದು ಪ್ರಬಲ ತಂಡವಿತ್ತು.

ಪಕ್ಷಕ್ಕೆ ಎಲ್ಲ ರೀತಿಯಲ್ಲೂ ಸಹಕಾರ ನೀಡಲು ಆರ್‍ಎಸ್‍ಎಸ್ ಕೂಡ ಇತ್ತು. ಇದರ ಅಂಗ ಸಂಸ್ಥೆಗಳಾದ ಎಬಿವಿಪಿ, ಕಿಸಾನ್ ಮೋರ್ಚಾ ಸೇರಿದಂತೆ ಅನೇಕ ಸಂಘಟನೆಗಳು ಬೇರು ಮಟ್ಟದಲ್ಲಿ ಕೆಲಸ ಮಾಡಿದ್ದರಿಂದ ಬೆಂಗಳೂರು ಬಿಜೆಪಿಗೆ ಎಂದೂ ಕೂಡ ಮುಳ್ಳಿನ ಹಾಸಿಗೆಯಾಗಿರಲಿಲ್ಲ.
2014ರ ಲೋಕಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಆಡಳಿತವಿದ್ದಾಗಲೇ ರಾಜಧಾನಿಯ ಮೂರು ಕ್ಷೇತ್ರಗಳಲ್ಲಿ ಕಮಲ ಅರಳಿತ್ತು. ಬೆಂಗಳೂರು ದಕ್ಷಿಣದಲ್ಲಿ ಅನಂತಕುಮಾರ್, ಬೆಂಗಳೂರು ಉತ್ತರದಲ್ಲಿ ಡಿ.ವಿ.ಸದಾನಂದಗೌಡ ಹಾಗೂ ಬೆಂಗಳೂರು ಸೆಂಟ್ರಲ್‍ನಲ್ಲಿ ಪಿ.ಸಿ.ಮೋಹನ್ ವಿಜಯದ ಪತಾಕೆ ಹಾರಿಸಿದ್ದರು.
ಅತ್ಯಂತ ತುರುಸಿನ ಸ್ಪರ್ಧೆಯಲ್ಲೂ ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ ನೂರು ಸ್ಥಾನಗಳನ್ನು ಗೆದ್ದುಕೊಂಡಿತ್ತು.ಒಂದು ಬಾರಿ ಬಿಬಿಎಂಪಿಯಲ್ಲಿ ಸ್ಪಷ್ಟ ಬಹುಮತ ಪಡೆದು ಅಧಿಕಾರವನ್ನು ನಡೆಸಿತ್ತು.

ಆದರೆ ಇತ್ತೀಚೆಗೆ ನಾಯಕರ ನಡುವಿನ ವೈಮನಸ್ಸು ಪರಸ್ಪರ ಕಾಲೆಳೆಯುವಿಕೆ, ನಂಬಿಕೆ ಇಲ್ಲದಿರುವುದೇ ಪಕ್ಷದ ಕಳಪೆ ಸಾಧನೆಗೆ ಮುಖ್ಯ ಕಾರಣ ಎನ್ನಲಾಗುತ್ತಿದೆ.
ಮಿಷನ್20:
ಹಾಗೆ ನೋಡಿದರೆ ವಿಧಾನಸಭೆ ಚುನಾವಣೆಗೂ ಮುನ್ನವೇ ರಾಜಧಾನಿ ಬೆಂಗಳೂರಿನಲ್ಲಿ ಬಿಜೆಪಿ 28 ಕ್ಷೇತ್ರಗಳ ಪೈಕಿ 20 ಸ್ಥಾನಗಳನ್ನು ಗೆಲ್ಲಲು ಗುರಿ ಇಟ್ಟುಕೊಂಡಿತ್ತು. ಇದಕ್ಕೆ ಬೇಕಾದ ರೀತಿಯಲ್ಲಿ ಸಿದ್ಧತೆಯನ್ನು ಮಾಡಿಕೊಂಡಿತ್ತು.

ಸರ್ಕಾರದ ವಿರುದ್ಧ ಪದೇ ಪದೇ ಹೋರಾಟ,ಮಹಿಳೆಯರು-ಮಕ್ಕಳ ಮೇಲೆ ನಡೆಯುತ್ತಿದ್ದ ದೌರ್ಜನ್ಯ ಪ್ರಕರಣಗಳು, ಕಾನೂನು ಸುವ್ಯವಸ್ಥೆ ಕುಸಿತ, ಮೂಲಭೂತ ಸೌಕರ್ಯಗಳ ಕೊರತೆ ಸೇರಿದಂತೆ ಹತ್ತು ಹಲವು ಅಂಶಗಳನ್ನು ಮುಂದಿಟ್ಟುಕೊಂಡು ತಿಂಗಳಿಗೆ ಒಂದರಿಂದ ಎರಡು ಬಾರಿ ಪ್ರತಿಭಟನೆ, ಧರಣಿ ಇತ್ಯಾದಿ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಲೇ ಇತ್ತು.

ಇನ್ನು ವಿಧಾನಸಭಾ ಚುನಾವಣೆ ವೇಳೆ ಬೆಂಗಳೂರಿನಲ್ಲಿ ಹೆಚ್ಚು ಸ್ಥಾನ ಗಳಿಸಬೇಕೆಂಬ ಉದ್ದೇಶದಿಂದ ಮತದಾರರನ್ನು ಓಲೈಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಎರಡು ಬಾರಿ ಬಂದು ಅಬ್ಬರದ ಪ್ರಚಾರ ನಡೆಸಿದ್ದರು.
ಆದರೆ ಬಿಜೆಪಿಯ ಎಲ್ಲ ಲೆಕ್ಕಾಚಾರಗಳು ತಲೆಕೆಳಗಾಗಿದೆ. 2019ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆ ಹಾಗೂ ಮುಂಬರುವ ಬಿಬಿಎಂಪಿ ಚುನಾವಣೆ ಪಕ್ಷಕ್ಕೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ