ಮೋದಿ ಪ್ರಭಾವ ಎಲ್ಲಿದೆ: ಬಿಜೆಪಿ ಸೋಲಿನ ಕುರಿತಂತೆ ಕಾಂಗ್ರೆಸ್ ಪ್ರಶ್ನೆ

 

ಬೆಂಗಳೂರು,ಜೂ.1-ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಕುರಿತಂತೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಮೋದಿ ಪ್ರಭಾವ ಎಲ್ಲಿದೆ ಎಂದು ಪ್ರಶ್ನಿಸಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಕುಮಾರಕೃಪ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಒಂದು ಕ್ಷೇತ್ರ ಹೊರತುಪಡಿಸಿ ಎಲ್ಲ ಕಡೆ ಬಿಜೆಪಿ ಸೋತಿದೆ. ಮೋದಿ ಪ್ರಭಾವ ಎಂದು ಪದೇ ಪದೇ ಹೇಳಲಾಗುತಿತ್ತು. ಈಗ ಮೋದಿ ಪ್ರಭಾವ ಎಲ್ಲಿದೆ ತೋರಿಸಿ ಎಂದು ಹೇಳಿದರು.

ಬಿಜೆಪಿಯವರು ಲೋಕಸಭೆ ಚುನಾವಣೆ ವೇಳೆ ಜನರಿಗೆ ಮೋಸ ಮಾಡಿದ್ದಾರೆ. ಈಗ ಜನರಿಗೆ ನಿಧಾನವಾಗಿ ಎಲ್ಲವೂ ಅರ್ಥವಾಗಿದೆ. ಅಚ್ಚೇ ದಿನ್ ಬರಲಿದೆ ಎಂದು ಹೇಳಲಾಗುತ್ತಿತ್ತು. ಎಲ್ಲಿ ಒಳ್ಳೆಯ ದಿನ ಬಂದಿದೆ. ಜನರನ್ನು ಹೆಚ್ಚು ಕಾಲ ಮೋಸ ಮಾಡಲು ಸಾಧ್ಯವಿಲ್ಲ. ಅದರ ಪರಿಣಾಮವೇ ಉಪಚುನಾವಣೆ ಫಲಿತಾಂಶದಲ್ಲಿ ಮೋದಿ ಪ್ರಭಾವ ಏನು ಎಂದು ತಿಳಿದುಬಂದಿದೆ ಎಂದು ತಿರುಗೇಟು ನೀಡಿದರು.
ಡಿಕೆಶಿ ಮೇಲಿನ ದಾಳಿಗೆ ಆಕ್ರೋಶ:
ಕಾನೂನು ಜಾರಿಗೆ ಕಾಂಗ್ರೆಸ್ ಯಾವುದೇ ವಿರೋಧ ವ್ಯಕ್ತಪಡಿಸುತ್ತಿಲ್ಲ. ಆದರೆ ನಾನು ಕರ್ನಾಟಕದ ಉಸ್ತುವಾರಿಯಾಗಿ ನೇಮಕವಾದಾಗಿನಿಂದ ನೋಡುತ್ತಿದ್ದೇನೆ. ಕೇಂದ್ರ ಸರ್ಕಾರ ಕೇವಲ ಕಾಂಗ್ರೆಸ್ ನಾಯಕರನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ.
ಸಿಬಿಐ, ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ ಸಂಸ್ಥೆಗಳು ಮೇಲ್ನೋಟಕ್ಕೆ ಕಾನೂನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಕಂಡುಬರುತ್ತಿದೆ. ಕಾಂಗ್ರೆಸ್ ಹೊರತುಪಡಿಸಿ ಬೇರೆ ಯಾವುದೇ ನಾಯಕರ ಮೇಲೆ ದಾಳಿ ನಡೆಸಿಲ್ಲ. ನಮ್ಮ ನಾಯಕರ ಮನೆ ಮೇಲೆ ನಡೆಸಿದ ದಾಳಿಯ ಫಲಿತಾಂಶವಾದರೂ ಏನು ಎಂದು ಪ್ರಶ್ನಿಸಿದರು.

ರಾಜಕೀಯ ದ್ವೇಷವಲ್ಲದೆ ಇಲ್ಲಿ ಬೇರೇನೂ ಇಲ್ಲ. ಕೇಂದ್ರ ಸರ್ಕಾರದ ಈ ಧೋರಣೆ ಖಂಡನೀಯ ಎಂದರು.
ಸಂಪುಟ ವಿಸ್ತರಣೆ ಸಂಬಂಧ ಸಣ್ಣಪುಟ್ಟ ವಿಷಯಗಳು ಬಗೆಹರಿಯಬೇಕಿದೆ. ಈಗ ದೇವೇಗೌಡರನ್ನು ಭೇಟಿ ಮಾಡಲಿದ್ದು , ಎರಡುಮೂರು ಗಂಟೆಯೊಳಗೆ ಎಲ್ಲವೂ ಇತ್ಯರ್ಥವಾಗಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮೈತ್ರಿ ಸರ್ಕಾರಕ್ಕೆ ದೇಶವ್ಯಾಪಿ ಹರ್ಷ:
ಜೆಡಿಎಸ್-ಕಾಂಗ್ರೆಸ್ ಮೈತ್ರಿಸರ್ಕಾರವನ್ನು ಇಡೀ ದೇಶವೇ ಸ್ವಾಗತಿಸಿದೆ. ಕಾಂಗ್ರೆಸ್‍ನಲ್ಲಿ ಎಲ್ಲರೂ ಸಮಾಧಾನದಿಂದಿದ್ದಾರೆ. ಜೆಡಿಎಸ್ ನಾಯಕರ ವಿರೋಧ ವ್ಯಕ್ತವಾಗುತ್ತಿದೆ ಎಂಬ ಅಪಪ್ರಚಾರ ಸುಳ್ಳು ಎಂದು ಅವರು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ