ಸಾಲ ಮನ್ನಾವಾಗಬೇಕಾದರೆ ಫಲಾನುಭವಿ ಕಡ್ಡಾಯವಾಗಿ ಆಧಾರ್ ಹಾಗೂ ಪಾನ್‍ಕಾರ್ಡ್‍ಗಳನ್ನು ಹೊಂದಿರಲೇಬೇಕು: ರಾಜ್ಯ ಸರ್ಕಾರ ಕಠಿಣ ಷರತ್ತು

ಬೆಂಗಳೂರು ,ಜೂ.1-ಸಹಕಾರಿ ಬ್ಯಾಂಕ್‍ಗಳಿಂದ ರೈತರು ಪಡೆದಿರುವ ಬೆಳೆ ಸಾಲ ಮನ್ನಾ ಮಾಡಲು ರಾಜ್ಯ ಸರ್ಕಾರ ಈ ಬಾರಿ ಕಠಿಣ ಷರತ್ತುಗಳನ್ನು ವಿಧಿಸಲು ಮುಂದಾಗಿದೆ.

ಈ ಪ್ರಕಾರ ಯಾವುದೇ ಒಬ್ಬ ರೈತ ಸಹಕಾರಿ ಬ್ಯಾಂಕ್‍ಗಳಿಂದ ಪಡೆದಿರುವ ಸಾಲ ಮನ್ನಾವಾಗಬೇಕಾದರೆ ಅಂಥ ಫಲಾನುಭವಿ ಕಡ್ಡಾಯವಾಗಿ ಆಧಾರ್ ಹಾಗೂ ಪಾನ್‍ಕಾರ್ಡ್‍ಗಳನ್ನು ಹೊಂದಿರಲೇಬೇಕು. ಒಂದು ವೇಳೆ ಇವರೆಡೂ ಇಲ್ಲದಿದ್ದರೆ ಸಾಲ ಮನ್ನಾವಾಗುವ ಖಾತ್ರಿ ಇರುವುದಿಲ್ಲ.
ಈಗಾಗಲೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ನಡೆಸಿರುವ ಮಾತುಕತೆ ಸಂದರ್ಭದಲ್ಲಿ ಕೆಲವು ನಕಲಿ ಫಲಾನುಭವಿಗಳು ಸರ್ಕಾರದ ಲಾಭ ಪಡೆಯಲು ಮುಂದಾಗುವುದನ್ನು ತಪ್ಪಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ.
ಈ ಹಿಂದೆ ಮಹಾರಾಷ್ಟ್ರದಲ್ಲಿ ಅಲ್ಲಿನ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಹಕಾರಿ ಬ್ಯಾಂಕ್‍ಗಳಿಂದ ರೈತರು ಪಡೆದಿರುವ ಸಾಲ ಮನ್ನಾ ಮಾಡುವಾಗ ಕಠಿಣವಾದ ಮಾರ್ಗಸೂಚಿಗಳನ್ನು ವಿಧಿಸಿದ್ದರು.

ಪಾನ್‍ಕಾರ್ಡ್ ಇಲ್ಲವೇ ಆಧಾರ್ ಕಾರ್ಡ್ ಹೊಂದಿರುವ ರೈತರ ಸಾಲಮನ್ನಾ ಮಾಡಿದ್ದರಿಂದ ಇದರ ಪ್ರಯೋಜನ ನಿಜವಾದ ಫಲಾನುಭವಿಗಳಿಗೆ ಸಿಕ್ಕಿತ್ತು. ಪಾನ್‍ಕಾರ್ಡ್‍ನಲ್ಲಿ ಫಲಾನುಭವಿಗಳ ಎಲ್ಲ ಆರ್ಥಿಕ ವ್ಯವಹಾರಗಳ ದಾಖಲೆಗಳ ಸಂಪೂರ್ಣ ಚಿತ್ರಣ ಸರ್ಕಾರಕ್ಕೆ ಲಭ್ಯವಾಗಲಿದೆ. ಅಲ್ಲದೆ ನಿಜವಾದ ಅರ್ಹರನ್ನು ಗುರುತಿಸಲು ಇದರಿಂದ ಸಾಧ್ಯವಾಗುತ್ತದೆ.
ಈಗಾಗಲೇ ಕೇಂದ್ರ ಸರ್ಕಾರ, ಸರ್ಕಾರದ ಯೋಜನೆಗಳಿಗೆ ಬ್ಯಾಂಕ್‍ಗಳು ಆಧಾರ್ ಕಾರ್ಡ್ ಲಿಂಕ್ ಮಾಡಬೇಕೆಂದು ಸೂಚಿಸಿದೆ. ಇದರಿಂದ ಅರ್ಹರನ್ನು ಗುರುತಿಸಿ ಹೆಚ್ಚು ತೆರಿಗೆ ಪಾವತಿಸುವವರು, ಶ್ರೀಮಂತರು, ಉದ್ಯಮಿಗಳು, ಜನಪ್ರತಿನಿಧಿಗಳು ಹಾಗೂ ಉನ್ನತಸ್ಥರದವರನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಡಲು ಸಾಧ್ಯವಾಗುತ್ತದೆ.

ಸಹಕಾರಿ ಬ್ಯಾಂಕ್‍ಗಳಿಂದ ರೈತರು ಸಾಲ ಪಡೆದಿದ್ದರೆ ಪಹಣಿ ದಾಖಲೆಗಳು ರೈತರ ಆದಾಯದ ನಷ್ಟ ವಿವರ ನೀಡುತ್ತವೆ. ಏಪ್ರಿಲ್ 1, 2009ರಿಂದ ಡಿಸೆಂಬರ್ 31, 2017ರವರೆಗೆ ಸಾಲ ಮನ್ನಾ ಮಾಡುವ ಸಾಧ್ಯತೆ ಇದೆ. ಇದರಿಂದ ಬಡವ, ಅತೀ ಬಡ ರೈತರನ್ನು ಒಳಪಡಿಸಿದರೂ ಸರ್ಕಾರದ ಬೊಕ್ಕಸಕ್ಕೆ 35000 ಕೋಟಿ ರೂ. ಹೊರೆಯಾಗುತ್ತದೆ.

ನೋಡಲ್ ಅಧಿಕಾರಿ ನೇಮಕ:
ಈ ಬಾರಿ ಸಾಲಮನ್ನಾ ವಿಚಾರದಲ್ಲಿ ಜಿಲ್ಲಾಧಿಕಾರಿಗಳನ್ನೇ ನೋಡಲ್ ಅಧಿಕಾರಿ ಎಂದು ಘೋಷಿಸಿರುವುದರಿಂದ ಮಧ್ಯವರ್ತಿಗಳ ಕೈವಾಡಕ್ಕೆ ತಕ್ಕಮಟ್ಟಿಗೆ ಕಡಿವಾಣ ಬಿದ್ದಂತಾಗಿದೆ. ಅಲ್ಲದೆ ಸಾಲ ಮಾಡಿರುವ, ಕಂತು ಕಟ್ಟಿರುವ ಹಾಗೂ ಸಾಲ ಬಾಕಿ ಇರುವ ದಾಖಲೆಗಳನ್ನು ರೈತರು ನೋಡಲ್ ಅಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಹೇಳಿರುವುದರಿಂದ ನಕಲಿ ಸಾಲಗಾರರ ಆಟ ನಡೆಯುವುದಿಲ್ಲ ಎನ್ನಲಾಗಿದೆ.

ಸಾಲಮನ್ನಾದ ಪ್ರಯೋಜನ ರೈತರಿಗೇ ಸಿಗಬೇಕು ಎಂದು ಕುಮಾರಸ್ವಾಮಿ ಕೆಲವು ಷರತ್ತುಗಳನ್ನು ಹಾಕಿಕೊಂಡಿದ್ದಾರೆ. ಆ ಮಟ್ಟಿಗೆ ಈ ಬಾರಿಯ ಸಾಲಮನ್ನಾದ ನೇರ ಪ್ರಯೋಜನ ಸಾಲ ಮಾಡಿ ಸಂಕಷ್ಟದಲ್ಲಿರುವ ರೈತರಿಗೆ ತಲುವಂತೆ ಕಾಣುತ್ತಿದೆ. ಆದರೆ ಸರಕಾರ ಚಾಪೆ ಕೆಳಗೆ ತೂರಿದರೆ ರಂಗೋಲಿ ಕೆಳಗೆ ತೂರುವ ಮಧ್ಯವರ್ತಿಗಳಿರುವಾಗ ಈ ಸಾಲಮನ್ನಾದ ಆಶಯ ನೂರಕ್ಕೆ ನೂರಷ್ಟು ಈಡೇರುತ್ತದೆ ಎಂಬುದನ್ನು ನಿರೀಕ್ಷಿಸುವುದೂ ಕಷ್ಟವಿದೆ.

ಏಪ್ರಿಲ್ 1, 2009 ರಿಂದ ಡಿಸೆಂಬರ್ 31, 2017 ವರೆಗೆ ಮೊದಲ ಸ್ಕೀಂನಲ್ಲಿ ಚುನಾಯಿತ ಸದಸ್ಯರ, ಕೃಷಿ ಸಾಲ ಪಡೆದು ಉದ್ಯಮಕ್ಕೆ ಬಳಸಿದವರ, ಸತತ 3 ವರ್ಷ 4 ಲಕ್ಷಕ್ಕೆ ಆದಾಯಕ್ಕೆ ತೆರಿಗೆ ಕಟ್ಟಿರುವವರ, ಸಹಕಾರ ಬ್ಯಾಂಕ್ ಪದಾಧಿಕಾರಿಗಳಾಗಿ 3 ಲಕ್ಷ ಆದಾಯ ಇರುವವರ ಸಾಲಮನ್ನಾ ಇಲ್ಲ. ಅಲ್ಲದೇ ನಗರ ಪಾಲಿಕೆ ವ್ಯಾಪ್ತಿ ವಾಣಿಜ್ಯ ಬ್ಯಾಂಕ್‍ಗಳಲ್ಲಿ ಸಾಲ ಪಡೆದ ಸಾಲ ಮನ್ನಾ ಇಲ್ಲ ಅಂತ ಹೇಳಿದ್ರು. ಇದರಲ್ಲಿ ವರ್ಷಕ್ಕೆ 4 ಲಕ್ಷ ರೂ. ಆದಾಯ ಹೊಂದಿ ತೆರಿಗೆ ಕಟ್ಟುವವರನ್ನು ಸೇರಿಸಬೇಕಾ ಎಂಬುದರ ಬಗ್ಗೆ ಚರ್ಚೆ ನಡೆಸಲಾಗುವುದು. ಕೃಷಿ ಸಾಲ ಪಡೆದು ಉದ್ಯಮಕ್ಕೆ ಬಂಡವಾಳ ಹಾಕಿರುವವರನ್ನು ಸೇರಿಸಬೇಕೆ? ಸಹಕಾರಿ ಬ್ಯಾಂಕ್ ಗಳಲ್ಲಿ 3 ಲಕ್ಷ ಆದಾಯ ಇರುವವರನ್ನು ಸೇರಿಸಬೇಕೇ? ಎನ್ನುವುದರ ಬಗ್ಗೆ ಪರಿಶೀಲನೆ ನಡೆಸಲು ಜಿಲ್ಲಾಧಿಕಾರಿಗಳ ನೇಮಕ ಮಾಡಲು ಸರ್ಕಾರ ಮುಂದಾಗಿದೆ.
ಸ್ಕೀಂ 2ರಲ್ಲಿ ತೋಟಗಾರಿಕೆ, ಯಂತ್ರ ಸಲಕರಣೆ ಸೇರಿದಂತೆ ಇನ್ನಿತರ ಸಾಲದ ಬಗ್ಗೆ ನಿರ್ಧಾರ ಮಾಡಲಾಗುವುದು. ಒಟ್ಟಿನಲ್ಲಿ ಆರ್ಥಿಕ ಶಿಸ್ತಿನಲ್ಲಿ ಸಾಲಮನ್ನಾ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ