ಮಂಗಳೂರು/ಉಡುಪಿ,ಮೇ 30
ಕರಾವಳಿಗೆ ಮುಂಗಾರು ನಿರೀಕ್ಷೆಯಲ್ಲಿರುವಂತೆಯೇ, ಮುಂಗಾರು ಪೂರ್ವ ಧಾರಾಕಾರ ಮಳೆಗೆ ಅವಿಭಜಿತ ಕನ್ನಡ ಜಿಲ್ಲೆಯಲ್ಲಿ ನಾಲ್ವರ ಜೀವ ಹಾನಿಯಾಗಿದೆ.
ಸೋಮವಾರ ರಾತ್ರಿಯಿಂದ ಮಂಗಳವಾರ ಸಂಜೆ ವರೆಗೆ ಎಡೆಬಿಡದೆ ಸುರಿದ ಮಳೆ-ಗಾಳಿ-ಸಿಡಿಲಿಗೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಲಕ್ಷಾಂತರ ರೂ. ಆಸ್ತಿಪಾಸ್ತಿ ಹಾನಿಯಾಗಿದೆ. ಹಲವು ಮನೆಗಳು, ರಸ್ತೆಗಳು ಕೃತಕ ನೆರೆಯಿಂದಾವೃತವಾಗಿ ಜನಜೀವನ ದುಸ್ತರಗೊಂಡಿದೆ.
ಮಂಗಳೂರಿನ ಕೆಪಿಟಿ ಸಮೀಪದ ಉದಯನಗರದಲ್ಲಿ ಮನೆ ಹಿಂಭಾಗದ ಧರೆ ಕುಸಿದು ಮೋಹಿನಿ (60) ಎಂಬ ಮಹಿಳೆ ಮಣ್ಣಿನಡಿ ಸಿಲುಕಿ ಸಾವನ್ನಪ್ಪಿದ್ದಾಳೆ. ಕೊಡಿಯಾಲ್‌ಬೈಲ್‌ನ ಮುಕ್ತ ಬಾಲೈ (80) ನೀರಿಗೆ ಬಿದ್ದು ಮೃತಪಟ್ಟಿದ್ದಾರೆ. ಮಂಗಳವಾರ ಮುಂಜಾನೆ 3 ಗಂಟೆ ವೇಳೆಗೆ ಬೈಲೂರು ಸಮೀಪದ ಬಸಿª ಶಾಲೆ ಎಂಬಲ್ಲಿ ಸಿಡಿಲು ಬಡಿದು ಕಾರ್ಕಳ ಗ್ರಾ.ಪಂ.ಸದಸ್ಯೆ ಶೀಲಾ (35) ಅವರು ಮೃತಪಟ್ಟಿದ್ದಾರೆ. ಪಕ್ಕದಲ್ಲೇ ಮಲಗಿದ್ದ ಅವರ ಪತಿ ಭಾಸ್ಕರ ಗಾಯಗೊಂಡಿದ್ದಾರೆ. ಪಡುಬಿದ್ರಿ ಸಮೀಪದ ಪಾದೆಬೆಟ್ಟು ಪಟ್ಲದಲ್ಲಿ ಸಹೋದರಿಯೊಂದಿಗೆ ಶಾಲೆಗೆ ಹೋಗಿದ್ದ ಪಡುಬಿದ್ರಿಯ ಎಸ್‌ಬಿವಿಪಿ ಹಿ.ಪ್ರಾ.ಶಾಲೆಯ 4ನೇ ತರಗತಿ ವಿದ್ಯಾರ್ಥಿನಿ ನಿಧಿ (9) ನೆರೆಯ ನೀರಿನಲ್ಲಿ ಕೊಚ್ಚಿಹೋಗಿದ್ದಾಳೆ.
ಶಾಲಾ-ಕಾಲೇಜಿಗೆ ರಜೆ
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲ ಶಾಲಾ- ಕಾಲೇಜುಗಳಿಗೆ ಬುಧವಾರವೂ ರಜೆ ಘೋಷಿಸಲಾಗಿದೆ .
ರೈಲು, ವಿಮಾನ ಸಂಚಾರ ವ್ಯತ್ಯಯ
ಪಡೀಲ್- ಜೋಕಟ್ಟೆ ನಡುವಣ ರೈಲು ಹಳಿಯಲ್ಲಿ ಎರಡು ಕಡೆ ಭೂಕುಸಿತ ಸಂಭವಿಸಿದ ಕಾರಣ ಕೊಂಕಣ ರೈಲ್ವೇಯ ಐದು ರೈಲುಗಳ ಓಡಾಟದಲ್ಲಿ ಹಾಗೂ ನೇತ್ರಾವತಿ ಉಳ್ಳಾಲ ಭಾಗದಲ್ಲಿ ಭೂಕುಸಿತ ಸಂಭವಿಸಿ ಎರಡು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿತ್ತು.
ಮಧ್ಯಾಹ್ನ 12ಕ್ಕೆ ಮುಂಬೈಯಿಂದ ಬರಬೇಕಿದ್ದ ಏರ್ ಇಂಡಿಯಾ ವಿಮಾನ ತಿರುವನಂತಪುರಕ್ಕೆ ತೆರಳಿದ್ದು, ಅಲ್ಲಿಂದ ವಾಪಸ್ ಮುಂಬೈಗೆ ಪ್ರಯಾಣಿಸಿದೆ.