ಜೂ.11 ರಂದು ವಿಧಾನಪರಿಷತ್ ಚುನಾವಣೆ: ರಂಗೇರಿದ ಅಖಾಡ; ಕಾಂಗ್ರೆಸ್, ಬಿಜೆಪಿ, ಜೆಡಿಎಸ್‍ನಲ್ಲಿ ಹೆಚ್ಚಿದ ಆಕಾಂಕ್ಷಿಗಳ ಪಟ್ಟಿ

ಬೆಂಗಳೂರು, ಮೇ 29-ವಿಧಾನಸಭೆಯಿಂದ ವಿಧಾನಪರಿಷತ್‍ಗೆ 11 ಸ್ಥಾನಗಳಿಗೆ ಜೂ.11 ರಂದು ನಡೆಯಲಿರುವ ಚುನಾವಣಾ ಕಾವು ರಂಗೇರತೊಡಗಿದೆ.
ಕಾಂಗ್ರೆಸ್, ಬಿಜೆಪಿ, ಜೆಡಿಎಸ್‍ನಲ್ಲಿ ಆಕಾಂಕ್ಷಿಗಳ ಪಟ್ಟಿ ಹೆಚ್ಚಾಗತೊಡಗಿದೆ. ಮೇಲ್ಮನೆಯ 11 ಸ್ಥಾನಗಳಲ್ಲಿ ಬಿಜೆಪಿಗೆ 5, ಕಾಂಗ್ರೆಸ್‍ಗೆ 4, ಜೆಡಿಎಸ್‍ನಿಂದ 2 ಸದಸ್ಯರು ಆಯ್ಕೆಯಾಗುವ ಅವಕಾಶವಿದ್ದು, ಬಿಜೆಪಿಯಿಂದ ಡಿ.ಎಸ್.ವೀರಯ್ಯ, ಸೋಮಣ್ಣ ಬೇವಿನಮರದ್, ಭಾನುಪ್ರಕಾಶ್, ಬಿ.ಜೆ.ಪುಟ್ಟಸ್ವಾಮಿ, ರಘುನಾಥ್ ಮಲ್ಕಾಪುರ ನಿವೃತ್ತಿಯಾಗುತ್ತಿದ್ದು, ಈ ಐವರು ಪುನರಾಯ್ಕೆ ಬಯಸಿದ್ದಾರೆ.
ಕಾಂಗ್ರೆಸ್‍ನಲ್ಲಿ ಕೆ.ಗೋವಿಂದರಾಜ್, ಸಿ.ಎಂ.ಇಬ್ರಾಹಿಂ, ಮೋಟಮ್ಮ ಅವರೂ ಕೂಡ ಪುನರಾಯ್ಕೆ ಬಯಸಿದ್ದು, ಇವರ ಜೊತೆ ವಿ.ಆರ್.ಸುದರ್ಶನ್, ಮಾಜಿ ಸಚಿವೆ ರಾಣಿ ಸತೀಶ್, ಮಾಜಿ ಸಚಿವ ನಜೀರ್ ಅಹಮ್ಮದ್ ಆಕಾಂಕ್ಷಿಗಳಾಗಿದ್ದಾರೆ.
ಜೆಡಿಎಸ್‍ನಲ್ಲಿ ಬಿ.ಎಂ.ಫಾರೂಕ್, ಆರ್.ಪ್ರಕಾಶ್, ನಾರಾಯಣರಾವ್, ನಟ ದರ್ಶನ್, ಕೋನರೆಡ್ಡಿ, ವೈ.ಎಸ್.ವಿ ದತ್ತ ಸೇರಿದಂತೆ ಅನೇಕರು ವಿಧಾನಪರಿಷತ್ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.

ಮಾಜಿ ಮೇಯರ್ ರಾಮಚಂದ್ರಪ್ಪ ಅವರೂ ಕೂಡ ಈ ಬಾರಿ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಜನಾರ್ಧನ ಪೂಜಾರಿ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಇವರನ್ನು ಮೇಲ್ಮನೆಗೆ ಆಯ್ಕೆ ಮಾಡಬೇಕೆಂದು ನಿರ್ಧರಿಸಲಾಗಿತ್ತಾದರೂ ಸ್ವಲ್ಪದರಲ್ಲಿ ಕೈ ತಪ್ಪಿತ್ತು. ಕಳೆದ 10 ವರ್ಷಗಳಿಂದ ಮಾಜಿ ಮೇಯರ್ ರಾಮಚಂದ್ರಪ್ಪ ಅವರ ಹೆಸರು ಪ್ರತಿ ಬಾರಿ ವಿಧಾನಪರಿಷತ್ ನಾಮಕರಣ ಸಂದರ್ಭದಲ್ಲಿ ಕೇಳಿ ಬರುತ್ತಿದೆ. ಕೊನೆ ಕ್ಷಣದಲ್ಲಿ ಅವಕಾಶ ಕೈ ತಪ್ಪುತ್ತದೆ. ಅವಕಾಶ ಕೈ ತಪ್ಪಿದ್ದಕ್ಕೆ ಯಾವುದೇ ಅಸಮಾಧಾನ ವ್ಯಕ್ತಪಡಿಸದ ರಾಮಚಂದ್ರಪ್ಪ, ತಮ್ಮಷ್ಟಕ್ಕೆ ತಾವು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತಾರೆ.

ಈ ಬಾರಿ ರಾಮಚಂದ್ರಪ್ಪ ಅವರನ್ನು ಏನಾದರೂ ಮಾಡಿ ಮೇಲ್ಮನೆ ಸದಸ್ಯರನ್ನಾಗಿ ಆಯ್ಕೆ ಮಾಡಿ ಕಳುಹಿಸಬೇಕೆಂದು ಕಾಂಗ್ರೆಸ್ ನಾಯಕರು ಇವರ ಪರ ಒಲವು ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಘಟಾನುಘಟಿಗಳ ನಡುವೆ ರಾಮಚಂದ್ರಪ್ಪ ಅವರು ಆಯ್ಕೆಯಾಗಲಿದ್ದಾರೆಯೇ ಎಂಬುದು ಪ್ರಶ್ನೆಯಾಗಿದೆ. ಆದರೆ ಕಾಂಗ್ರೆಸ್‍ನಲ್ಲಿ ಇಂತಹ ಆಯ್ಕೆ ನಡೆದಿರುವ ಉದಾಹರಣೆಗಳಿವೆ.
ರಾಮಚಂದ್ರಪ್ಪ ಅವರ ಪಕ್ಷ ನಿಷ್ಠೆ, ಬದ್ಧತೆಯನ್ನು ಯಾರೂ ಪ್ರಶ್ನಿಸುವಂತಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹರಿಪ್ರಸಾದ್, ಡಾ.ಜಿ.ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಬಹುತೇಕರು ಇವರ ಆಯ್ಕೆಗೆ ಸಮ್ಮತಿ ಸೂಚಿಸಿದ್ದಾರೆ. ಏನಾಗುತ್ತದೆಯೋ ಕಾದು ನೋಡಬೇಕು.

ಇತ್ತ ಬಿಜೆಪಿಯಲ್ಲಿ ಕೆ.ಪಿ.ನಂಜುಂಡಿ, ರುದ್ರೇಗೌಡ, ಬಿಜೆಪಿ ರಾಜ್ಯ ಪ್ರಧಾನಕಾರ್ಯದರ್ಶಿ ರವಿಕುಮಾರ್, ತೇಜಸ್ವಿನಿ ರಮೇಶ್, ಅಶ್ವತ್ಥನಾರಾಯಣ್ ಅವರು ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಈಗಾಗಲೇ ಬಿಜೆಪಿ ರಾಜ್ಯ ನಾಯಕರು ಅಭ್ಯರ್ಥಿಗಳ ಆಯ್ಕೆ ಸಂಬಂಧ ಮಾತುಕತೆ ನಡೆಸಿ ಹೈಕಮಾಂಡ್‍ಗೆ ಸಂಭಾವ್ಯ ಪಟ್ಟಿಯನ್ನು ರವಾನಿಸಿದ್ದಾರೆ.
ನಿವೃತ್ತಿ ಹೊಂದಿರುವವರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿದವರು, ಪಕ್ಷದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿರುವವರು ಸೇರಿದಂತೆ ಹಲವರು ಪೈಪೆÇೀಟಿ ನಡೆಸುತ್ತಿದ್ದು, ಪಕ್ಷಗಳು ಯಾರನ್ನು ಪರಿಗಣಿಸಲಿವೆ ಎಂಬುದು ಸದ್ಯದಲ್ಲೇ ಗೊತ್ತಾಗಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ