ಮಳೆಗಾಲದಲ್ಲಿ ನಡೆದಿರುವ ಕಾಮಗಾರಿಗಳ ಟಿವಿಸಿಸಿ ತನಿಖೆ ನಡೆಸಿದ ನಂತರವೇ ಬಿಲ್ ಬಿಡುಗಡೆ: ಮೇಯರ್ ಸಂಪತ್‍ರಾಜ್

ಬೆಂಗಳೂರು, ಮೇ 29- ಮಳೆಗಾಲದಲ್ಲಿ ನಡೆದಿರುವ ಕಾಮಗಾರಿಗಳನ್ನು ಟಿವಿಸಿಸಿ ತನಿಖೆ ನಡೆಸಿದ ನಂತರವೇ ಬಿಲ್ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ ಎಂದು ಮೇಯರ್ ಸಂಪತ್‍ರಾಜ್ ತಿಳಿಸಿದರು.
ಮಳೆಗಾಲದಲ್ಲಿ ಮಾಡಿದ ಕಾಮಗಾರಿಗಳು ಸಾಕಷ್ಟು ಕಳಪೆಯಾಗಿವೆ. ಎಲ್ಲ ರಸ್ತೆಗಳೂ ಗುಂಡಿ ಬಿದ್ದಿವೆ ಎಂದು ಸಾರ್ವಜನಿಕರು, ಸಂಘ-ಸಂಸ್ಥೆಗಳಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಇಂದು ಮೇಯರ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಈ ತೀರ್ಮಾನ ತೆಗೆದುಕೊಂಡಿದ್ದಾರೆ.

ಟಿವಿಸಿಸಿ ತನಿಖೆ ನಡೆಸಿದ ನಂತರವೇ ಬಿಲ್ ಬಿಡುಗಡೆ ಮಾಡುವುದಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸಮ್ಮತಿಸಿರುವ ಹಿನ್ನೆಲೆಯಲ್ಲಿ ನಾವು ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಹೇಳಿದರು.
ನಾಳೆ ಮಾಸಿಕ ಸಭೆ ನಡೆಯಲಿದೆ. ಹಾಗಾಗಿ ಜೂ.31ರಿಂದ ನಾನು ಉಪಮೇಯರ್ ಪದ್ಮಾವತಿ ನರಸಿಂಹಮೂರ್ತಿ, ಆಡಳಿತ ಪಕ್ಷದ ನಾಯಕ ಶಿವರಾಜ್, ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ, ನೇತ್ರಾ ನಾರಾಯಣ್ ಜತೆಗೂಡಿ ಇನ್ಸ್‍ಪೆಕ್ಷನ್ ನಡೆಸುತ್ತೇವೆ. ಕಾಮಗಾರಿ ಕಳಪೆಯಾಗಿರುವುದು ಕಂಡುಬಂದರೆ ಅಲ್ಲಿನ ಬಿಲ್‍ಗಳನ್ನು ತಡೆಹಿಡಿಯುತ್ತೇವೆ ಎಂದು ಹೇಳಿದರು.
ನಗರೋತ್ಥಾನ ಯೋಜನೆಯಡಿ ಕೈಗೆತ್ತಿಕೊಂಡಿರುವ ಕಾಮಗಾರಿಗಳ ಪೈಕಿ ಶೇ.45ರಷ್ಟು ಪೂರ್ಣಗೊಂಡಿವೆ. ಉಳಿದ ಕಾಮಗಾರಿಯನ್ನು ಒಂದು ತಿಂಗಳೊಳಗೆ ಮುಗಿಸುತ್ತೇವೆ ಎಂದು ತಿಳಿಸಿದರು.

ರಾಜಕಾಲುವೆ ಒತ್ತುವರಿ ತೆರವು: ಮಳೆ ಬಂದಾಗ ಅನಾಹುತ ಸಂಭವಿಸಲು ರಾಜಕಾಲುವೆಗಳ ಒತ್ತುವರಿಯಾಗಿರುವುದೇ ಕಾರಣ ಎಂದು ಹೇಳಲಾಗುತ್ತಿದೆ. ಆದರೆ, ನಾವು ರಾಜಕಾಲುವೆಗಳ ಒತ್ತುವರಿ ತೆರವು ಮಾಡಲು ಕ್ರಮ ಕೈಗೊಂಡಿದ್ದೇವೆ. ರಾಜಕಾಲುವೆ ನೀರು ರಸ್ತೆಗೆ ನುಗ್ಗದಂತೆ ತಡೆಗೋಡೆ ಕಟ್ಟಲು ಹಾಗೂ ಸ್ಯಾಂಡ್‍ಬ್ಯಾಗ್ ಕಟ್ಟಲು ಕ್ರಮ ಕೈಗೊಳ್ಳಲಾಗಿದೆ. ರಾಜಕಾಲುವೆಗಳ ಹೂಳೆತ್ತಲು ಸೂಚಿಸಲಾಗಿದೆ ಎಂದು ಸಂಪತ್‍ರಾಜ್ ಹೇಳಿದರು.
ಒಟ್ಟಾರೆ, ಮಳೆಗಾಲದಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ ಎಂದರು.
ಜೂ.18ರೊಳಗೆ ಅಕ್ರಮ ಜಾಹೀರಾತು ಫಲಕ ತೆರವುಗೊಳಿಸುವ ಬಗ್ಗೆ ಅಂಕಿ-ಅಂಶ ನೀಡಬೇಕೆಂದು ಹೈಕೋರ್ಟ್ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಅಂಕಿ-ಅಂಶಗಳನ್ನು ಕೊಡುವಂತೆ ಅಧಿಕಾರಿಗಳಿಗೆ ಆದೇಶಿಸಲಾಗಿದೆ ಎಂದು ಹೇಳಿದರು.

ಎಂಜಿನಿಯರ್‍ಗಳಿಗೆ ಖಡಕ್ ಎಚ್ಚರಿಕೆ: ರಸ್ತೆಗಳಲ್ಲಿ ಒಂದೇ ಒಂದು ಗುಂಡಿ ಇರಕೂಡದು. ಈ ಬಾರಿ ಮಳೆಗಾಲದಲ್ಲಿ ಯಾವುದೇ ಅವಘಡ ಸಂಭವಿಸಿದರೂ ಎಂಜಿನಿಯರ್‍ಗಳೇ ನೇರ ಹೊಣೆ ಎಂದು ಮೇಯರ್ ಸಂಪತ್‍ರಾಜ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಹಲವು ದಿನಗಳಿಂದ ನಗರದಲ್ಲಿ ಭಾರೀ ಮಳೆಯಾಗುತ್ತಿದ್ದು, ಇತ್ತೀಚೆಗೆ ರಸ್ತೆಗಳಿಗೆ ಹಾಕಿದ್ದ ಟಾರ್ ಕಿತ್ತು ಬರುತ್ತಿದೆ. ಇದನ್ನೆಲ್ಲ ಸರಿಪಡಿಸದೆ ಏನು ಮಾಡುತ್ತಿದ್ದೀರ ಎಂದು ಎಂಜಿನಿಯರ್‍ಗಳನ್ನು ಮೇಯರ್ ತರಾಟೆಗೆ ತೆಗೆದುಕೊಂಡರು.

ಟೆಂಡರ್‍ಶ್ಯೂರ್ ರಸ್ತೆಗಳಲ್ಲಿ ಮಳೆ ನೀರು ನಿಲ್ಲುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಒಂದೊಂದು ಟೆಂಡರ್‍ಶ್ಯೂರ್ ರಸ್ತೆಗೆ 13 ರಿಂದ 14 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಆದರೂ ಈ ರಸ್ತೆಗಳಲ್ಲಿ ಮಳೆ ನೀರು ನಿಲ್ಲುತ್ತಿದೆ. ಈ ಬಗ್ಗೆ ಮಾಧ್ಯಮಗಳು ಸಾಕಷ್ಟು ಬಾರಿ ವರದಿ ಮಾಡಿದ್ದರೂ ಯಾವುದೇ ಎಂಜಿನಿಯರ್‍ಗಳು ಎಚ್ಚೆತ್ತುಕೊಂಡಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ತಕ್ಷಣದಿಂದಲೇ ಟೆಂಡರ್ ಶ್ಯೂರ್ ಕಾಮಗಾರಿಗಳನ್ನು ಪರಿಶೀಲನೆ ಮಾಡಬೇಕು, ಮಳೆಗಾಲಕ್ಕೆ ಈಗಿಂದೀಗಲೇ ಎಲ್ಲರೂ ಸಜ್ಜಾಗಬೇಕು. ಆದಷ್ಟು ಬೇಗ ಎಲ್ಲಾ ರಸ್ತೆಗಳನ್ನು ಪರಿಶೀಲನೆ ಮಾಡಬೇಕು. ಒಂದು ವೇಳೆ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಎಲ್ಲಾ ಅನಾಹುತಗಳಿಗೆ ನೀವೇ ಕಾರಣರಾಗುತ್ತೀರಾ ಎಂದು ಎಂಜಿನಿಯರ್‍ಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ಕೆಲ ಪ್ರದೇಶಗಳಲ್ಲಿ ಕಾಮಗಾರಿ ನಡೆಸದೆಯೇ ಗುತ್ತಿಗೆದಾರರು ಬಿಲ್ ಪಡೆದಿರುವುದು ಗಮನಕ್ಕೆ ಬಂದಿದೆ. ತಕ್ಷಣ ಕಾಮಗಾರಿಗಳನ್ನು ಪರಿಶೀಲನೆ ಮಾಡಿ ವರದಿ ನೀಡಿ ಎಂದು ಅಧಿಕಾರಿಗಳಿಗೆ ಸಂಪತ್‍ರಾಜ್ ಸೂಚಿಸಿದರು.
ಕಳೆದ ಬಾರಿ ಮಳೆಗಾಲದಲ್ಲಿ ಸಾರ್ವಜನಿಕರು ಸಾವನ್ನಪ್ಪಿರುವ ಉದಾಹರಣೆಗಳಿವೆ. ಮೈಸೂರು ರಸ್ತೆ ಗುಂಡಿಯಲ್ಲಿ ಬಿದ್ದು ಬೈಕ್ ಸವಾರ ಮೃತಪಟ್ಟಿದ್ದ. ಮತ್ತೆ ಇಂತಹ ಘಟನೆಗಳು ಮರುಕಳಿಸಬಾರದು. ಒಂದು ವೇಳೆ ನಡೆದರೆ ಆ ವಲಯದ ಮುಖ್ಯ ಎಂಜಿನಿಯರ್ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಉಪಮೇಯರ್ ಪದ್ಮಾವತಿ ನರಸಿಂಹಮೂರ್ತಿ, ಆಡಳಿತ ಪಕ್ಷದ ನಾಯಕ ಶಿವರಾಜ್, ನೇತ್ರಾನಾರಾಯಣ್, ಬಿಬಿಎಂಪಿ ಎಂಜಿನಿಯರ್‍ಗಳು ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ