ಬೆಂಗಳೂರು, ಮೇ 29-ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್‍ನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ಜೂ.11 ರಂದು ಮೇಲ್ಮನೆಯ 11 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಮೇ 31 ಕೊನೆಯ ದಿನವಾಗಿದೆ. ಜೆಡಿಎಸ್‍ಗೆ 2 ಸ್ಥಾನಗಳು ಸಿಗಲಿವೆ. ಈ ಎರಡು ಸ್ಥಾನಗಳಿಗಾಗಿ ಹಲವರು ಪೈಪೆÇೀಟಿ ನಡೆಸಿದ್ದಾರೆ. ಜೆಡಿಎಸ್ ಮಹಾ ಪ್ರಧಾನಕಾರ್ಯದರ್ಶಿ ಬಿ.ಎಂ.ಫಾರೂಕ್, ಬೆಂಗಳೂರು ನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ್, ವರಿಷ್ಠರಾದ ನಾರಾಯಣರಾವ್, ಮಾಜಿ ಶಾಸಕರಾದ ಕೋನರೆಡ್ಡಿ, ವೈ.ಎಸ್.ವಿ.ದತ್ತ ಅವರ ಹೆಸರುಗಳು ಕೇಳಿ ಬಂದಿವೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡರು, ರಾಜ್ಯಾಧ್ಯಕ್ಷ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಒಲವು ಯಾರ ಪರವಾಗಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ.
ಬಿ.ಎಂ.ಫಾರೂಕ್ ಹಾಗೂ ಆರ್.ಪ್ರಕಾಶ್ ಅವರು ನಾಮಪತ್ರ ಸಲ್ಲಿಸಲು ಅರ್ಜಿ ಪಡೆದಿದ್ದಾರೆ. ಬಿ.ಎಂ.ಫಾರೂಕ್ ಎರಡು ಬಾರಿ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿ ಸೋಲು ಅನುಭವಿಸಿದ್ದಾರೆ. ಅದೇರೀತಿ ಬೆಂಗಳೂರು ನಗರದಲ್ಲಿ ಜೆಡಿಎಸ್ ಪಕ್ಷವನ್ನು ಸಂಘಟಿಸಿ ಆರ್.ಆರ್.ನಗರದಲ್ಲಿ ಪ್ರಬಲ ಆಕಾಂಕ್ಷಿಯಾಗಿ ಕೊನೆ ಘಳಿಗೆಯಲ್ಲಿ ಹಿಂದೆ ಸರಿದಿದ್ದ ಆರ್.ಪ್ರಕಾಶ್ ಕೂಡ ಮೇಲ್ಮನೆಗೆ ಪ್ರಬಲ ಆಕಾಂಕ್ಷಿಯಾಗಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂಪುಟ ವಿಸ್ತರಣೆಯ ಬ್ಯುಸಿಯಲ್ಲಿರುವುದರಿಂದ ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ನಾಳೆ ಈ ಸಂಬಂಧ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ. ಅಂತಿಮವಾಗಿ ಯಾರನ್ನು ಆಯ್ಕೆ ಮಾಡಲಿದ್ದಾರೆ ಎಂಬುದು ಗೊತ್ತಾಗಲಿದೆ.