ಪಾಟ್ನಾ, ಮೇ 28- ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಂಡರೆ ವಿಪಕ್ಷದವರಿಗೆ ಭಯ ಕಾಡುತ್ತಿದೆ ಎಂದು ಬಿಹಾರದ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತ್ರತ್ವದ ಎನ್ ಡಿಎ ಮೈತ್ರಿ ಸರ್ಕಾರ ನಾಲ್ಕು ವರ್ಷ ಪೂರೈಸಿದ ಕುರಿತು ಮಾತನಾಡಿದ ಸುಶೀಲ್ ಮೋದಿ, ಕಾಂಗ್ರೆಸ್ನವರಿಗೆ ಪ್ರಧಾನಿ ಬಗ್ಗೆ ಸದಾ ಭೀತಿ ಕಾಡುತ್ತಿದೆ. ಒಂದು ಕಾಲದಲ್ಲಿ ಅದು ಇಡೀ ದೇಶವನ್ನು ಆಳಿತ್ತು. ಆದರೆ ಈಗ ಮೂರೂ, ನಾಲ್ಕೋ ರಾಜ್ಯದಲ್ಲಿ ಮಾತ್ರ ಅಧಿಕಾರದಲ್ಲಿದೆ ಎಂದು ವ್ಯಂಗ್ಯವಾಡಿದ್ದಾರೆ.
ಪ್ರಾದೇಶಿಕ ಪಕ್ಷಗಳ ನೆರವಿನೊಂದಿಗೆ ಆಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿವೆ. ಕರ್ನಾಟಕದಲ್ಲಿ 122 ರಿಂದ 78 ಸ್ಥಾನಕ್ಕೆ ಕುಸಿದಿರುವ ಕಾಂಗ್ರೆಸ್ ತಾನೇ ಗೆಲುವು ಸಾಧಿಸಿದ್ದೀನಿ ಎಂದು ಬೀಗುತ್ತಿದೆ ಎಂದು ಟೀಕಿಸಿದ್ದಾರೆ.
ಕರ್ನಾಟಕದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಗಮಿಸಿದ್ದ ಹಲವು ಪ್ರಾದೇಶಿಕ ಪಕ್ಷಗಳ ನಾಯಕರು, ಮುಖ್ಯಮಂತ್ರಿಗಳು ಒಗ್ಗಟ್ಟನ್ನು ಪ್ರದರ್ಶಿಶಿದ್ದಾರೆ. ಆದರೆ ಅವರು ಮರಳಿನ ಮೇಲೆ ಮನೆ ಕಟ್ಟುತ್ತಿದ್ದಾರೆ ಎಂದು ಕುಹಕವಾಡಿದ್ದಾರೆ.