ವಿಧಾನಪರಿಷತ್ ಚುನಾವಣೆ ಸಮೀಪಿಸಿದರೂ ಅತ್ತ ಗಮನ ಹರಿಸದ ನಾಯಕರು

ಬೆಂಗಳೂರು, ಮೇ 28-ಮೈತ್ರಿ ಸರ್ಕಾರದ ರಚನೆ, ಸಂಪುಟ ಪುನಾರಚನೆ ಒತ್ತಡದಲ್ಲಿ ಮುಳುಗಿರುವ ಕಾಂಗ್ರೆಸ್ ನಾಯಕರು ವಿಧಾನಪರಿಷತ್ ಚುನಾವಣೆ ಸಮೀಪಿಸಿದರೂ ಅತ್ತ ಗಮನ ಹರಿಸದೆ ಇರುವುದು ಮುಖಂಡರು, ಕಾರ್ಯಕರ್ತರು ಕೈ ಕೈ ಹಿಸುಕಿಕೊಳ್ಳುವಂತೆ ಮಾಡಿದೆ.
ವಿಧಾನಪರಿಷತ್‍ನಲ್ಲಿ ತೆರವಾಗುತ್ತಿರುವ 11 ಸ್ಥಾನಗಳಿಗೆ ನಾಮಪತ್ರ ಸಲ್ಲಿಸಲು ಮೇ 31 ಕೊನೆಯ ದಿನವಾಗಿದೆ. ಮೇ 24 ರಿಂದ ಅಧಿಸೂಚನೆ ಜಾರಿಯಾಗಿದ್ದು, ಜೂ.1 ರಂದು ನಾಮಪತ್ರ ಪರಿಶೀಲನೆ, ಜೂ.4 ರಂದು ನಾಮಪತ್ರ ಹಿಂಪಡೆಯಬೇಕಿದೆ. ಜೂ.11 ರಂದು ಮತದಾನ ನಡೆಯಲಿದೆ.

ಈಗಿರುವ ವಿಧಾನಸಭೆಯ ಸದಸ್ಯರ ಸಂಖ್ಯಾಬಲದಂತೆ ಬಿಜೆಪಿ-5, ಕಾಂಗ್ರೆಸ್-4, ಜೆಡಿಎಸ್-2 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ.
ವಿಧಾನಸಭೆಯಿಂದ ವಿಧಾನಪರಿಷತ್‍ಗೆ ಆಯ್ಕೆಯಾಗಿದ್ದ ಬಿಜೆಪಿ ಬಿ.ಜೆ.ಪುಟ್ಟಸ್ವಾಮಿ, ಡಿ.ಎಸ್.ವೀರಯ್ಯ, ಸೋಮಣ್ಣ ಬೇವಿನಮರದ್, ರಘುನಾಥ ಮಲ್ಕಾಪುರೆ, ಭಾನುಪ್ರಕಾಶ್, ಕಾಂಗ್ರೆಸ್‍ನ ಎಂ.ಆರ್.ಸೀತಾರಾಮ್, ಮೋಟಮ್ಮ, ಸಿ.ಎಂ.ಇಬ್ರಾಹಿಂ, ಕೆ.ಗೋವಿಂದರಾಜ್, ಭೆರತಿ ಸುರೇಶ್, ಜೆಡಿಎಸ್‍ನ ಸೈಯ್ಯದ್ ಮುದೀರ್ ಆಘಾ ಅವರು ಜೂ.17ಕ್ಕೆ ನಿವೃತ್ತರಾಗುತ್ತಿದ್ದಾರೆ. ಈ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದೆ.

ಕಾಂಗ್ರೆಸ್ ಸದಸ್ಯರಾದ ಎಂ.ಆರ್.ಸೀತಾರಾಮ್, ಸಿ.ಎಂ.ಇಬ್ರಾಹಿಂ, ಕೆ.ಗೋವಿಂದರಾಜು ಅವರು ಚುನಾವಣೆಯಲ್ಲಿ ಸ್ಪರ್ಧಿಸದೆ ಪಕ್ಷಕ್ಕಾಗಿ ಕೆಲಸ ಮಾಡಿದ್ದು, ಮತ್ತೆ ವಿಧಾನಪರಿಷತ್‍ಗೆ ಆಯ್ಕೆ ಮಾಡಬೇಕೆಂದು ಹಿರಿಯ ನಾಯಕರ ಮೇಲೆ ಒತ್ತಡ ಹೇರಿದ್ದಾರೆ.
ಮೋಟಮ್ಮ ಅವರು ಮೂಡಿಗೆರೆ ಕ್ಷೇತ್ರದಿಂದ ಟಿಕೆಟ್ ಪಡೆದು ಕಣಕ್ಕಿಳಿದು ಸೋಲು ಕಂಡಿದ್ದಾರೆ. ಭೆರತಿ ಸುರೇಶ್ ಹೆಬ್ಬಾಳ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮೋಟಮ್ಮ ದಲಿತ ಖೋಟಾದಲ್ಲಿ ವಿಧಾನಪರಿಷತ್‍ಗೆ ಆಯ್ಕೆಯಾಗಲು ಕಸರತ್ತು ಮಾಡುತ್ತಿದ್ದಾರೆ.

ಇನ್ನು ಭೆರತಿ ಸುರೇಶ್ ಅವರ ಜಾಗಕ್ಕೆ ಕುರುಬ ಸಮುದಾಯದ ನಾಯಕರನ್ನೇ ಆಯ್ಕೆ ಮಾಡಬೇಕೆಂಬ ಅಭಿಲಾಷೆ ಇದ್ದು, ಕುರುಬ ಸಮುದಾಯದಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಬಾದಾಮಿ ಕ್ಷೇತ್ರದ ಶಾಸಕರಾಗಿದ್ದ ಬಿ.ಬಿ.ಚಿಮ್ಮನಕಟ್ಟಿ ಈ ಬಾರಿ ತಮ್ಮ ಕ್ಷೇತ್ರವನ್ನು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರಿಗಾಗಿ ಬಿಟ್ಟುಕೊಟ್ಟಿದ್ದಾರೆ.

ಅದಕ್ಕೂ ಮೊದಲು ಕಾಂಗ್ರೆಸ್ ಚಿಮ್ಮನಕಟ್ಟಿ ಬದಲಾಗಿ ದೇವರಾಜ್ ಪಾಟೀಲ್ ಅವರಿಗೆ ಟಿಕೆಟ್ ಘೋಷಣೆ ಮಾಡಿದ್ದು, ಚಿಮ್ಮನಕಟ್ಟಿ ಬೆಂಬಲಿಗರು ಗಲಾಟೆ ಮಾಡಿದ್ದರು. ಕೊನೆಗೆ ಸಿದ್ದರಾಮಯ್ಯ ಅವರೇ ಅಭ್ಯರ್ಥಿಯಾದಾಗ ಚಿಮ್ಮನಕಟ್ಟಿ ಸೇರಿದಂತೆ ಎಲ್ಲಾ ನಾಯಕರು ಸಮಾಧಾನಗೊಂಡಿದ್ದರು.
ಆರೋಗ್ಯ ಹದಗೆಟ್ಟಿರುವುದರಿಂದ ಚಿಮ್ಮನಕಟ್ಟಿ ಅವರ ಬದಲಾಗಿ ಬೇರೆಯವರಿಗೆ ಅವಕಾಶ ಕೊಡಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ, ಆದರೆ ಚಿಮ್ಮನಕಟ್ಟಿ ತಮಗೇ ಅವಕಾಶ ಸಿಗಬೇಕು ಎಂದು ಒತ್ತಡ ಹೇರುತ್ತಿದ್ದಾರೆ.

ಇನ್ನು ಬ್ಯಾಡಗಿ ಕ್ಷೇತ್ರದ ಶಾಸಕರಾಗಿದ್ದ ಶಿವಣ್ಣನವರ್ ಅವರಿಗೆ ಟಿಕೆಟ್ ತಪ್ಪಿಸಿ ಎಸ್.ಆರ್.ಪಾಟೀಲ್ ಅವರಿಗೆ ಅವಕಾಶ ಮಾಡಿಕೊಡಲಾಗಿತ್ತು. ಟಿಕೆಟ್ ತಪ್ಪಿದಾಗ ಬಂಡಾಯವೆದ್ದಿದ್ದ ಶಿವಣ್ಣನವರ್ ಅವರನ್ನು ಸಮಾಧಾನ ಪಡಿಸಿ ಎಂಎಲ್‍ಸಿ ಮಾಡುವುದಾಗಿ ಭರವಸೆ ನೀಡಲಾಗಿತ್ತು. ಈಗ ಅವರೂ ಕೂಡ ಪಟ್ಟು ಹಿಡಿದಿದ್ದಾರೆ.
ಈ ನಡುವೆ ಸುಮಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲೇ ದುಡಿಯುತ್ತಿದ್ದು, ಯಾವುದೇ ಅಧಿಕಾರ ಅನುಭವಿಸದಿರುವ ಮಾಜಿ ಮೇಯರ್ ರಾಮಚಂದ್ರಪ್ಪ ಅವರು ಲಾಬಿ ಆರಂಭಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಮಚಂದ್ರಪ್ಪ ಅವರ ಆಯ್ಕೆಗೆ ಆಸಕ್ತಿ ತೋರಿಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

ಇನ್ನು ಮೋಟಮ್ಮ ಅವರ ಬದಲಾಗಿ ಬೇರೆ ಮಹಿಳೆಯರಿಗೆ ಅವಕಾಶ ನೀಡಬೇಕೆಂಬ ಒತ್ತಡ ಕೇಳಿ ಬರುತ್ತಿದ್ದು, ಕಾಂಗ್ರೆಸ್‍ನ ಹಿರಿಯ ನಾಯಕಿ ರಾಣಿಸತೀಶ್ ಸೇರಿದಂತೆ ಹಲವಾರು ಮಂದಿ ಆಕಾಂಕ್ಷಿಗಳಾಗಿದ್ದಾರೆ.
ಜೆಡಿಎಸ್ ನಾಯಕರ ನಿರ್ಧಾರವೇ ಅಂತಿಮ:
ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್‍ನಿಂದ ಸ್ಪರ್ಧಿಸಿ ಸೋತಿದ್ದ ಬಿ.ಎಂ.ಫಾರೂಕ್, ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷ ಎಂ.ಎಸ್.ನಾರಾಯಣರಾವ್ ಸೇರಿದಂತೆ ಹಲವು ಮುಖಂಡರು ವಿಧಾನಪರಿಷತ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಅಲ್ಲದೆ, ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿರುವ ಹಲವು ಶಾಸಕರು ಕೂಡ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಫಾರೂಕ್ ಅವರ ಹೆಸರು ಜೆಡಿಎಸ್‍ನಲ್ಲಿ ಮುಂಚೂಣಿಯಲ್ಲಿದೆ. ವಿಧಾನಪರಿಷತ್‍ಗೆ ಅಭ್ಯರ್ಥಿಗಳನ್ನು ಜೆಡಿಎಸ್ ಇನ್ನೂ ಅಂತಿಮಗೊಳಿಸಿಲ್ಲ. ವಿಧಾನಪರಿಷತ್‍ನ 11 ಸ್ಥಾನಗಳ ಪೈಕಿ 2 ಸ್ಥಾನ ಜೆಡಿಎಸ್‍ಗೆ ಲಭ್ಯವಾಗಲಿದ್ದು, ಯಾರನ್ನು ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡುತ್ತಾರೆಂಬುದು ತೀವ್ರ ಕುತೂಹಲ ಕೆರಳಿಸಿದೆ.

ಬಿಜೆಪಿಯಲ್ಲಿ ಆಕಾಂಕ್ಷಿಗಳ ದಂಡು:
ತೆರವಾಗಲಿರುವ ಐದು ಸ್ಥಾನಗಳಿಗೆ ಬಿಜೆಪಿಯಲ್ಲಿ ಆಕಾಂಕ್ಷಿಗಳ ಪಟ್ಟಿ ಹನುಮಂತನ ಬಾಲದಂತೆ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಇದರಲ್ಲಿ ರಘನಾಥ್ ಮಲ್ಕಾಪುರೆ, ಬಿ.ಜೆ.ಪುಟ್ಟಸ್ವಾಮಿ, ಡಿ.ಎಸ್.ವೀರಯ್ಯ, ಭಾನುಪ್ರಕಾಶ್ ಮತ್ತೊಂದು ಅವಧಿಗೆ ಮರು ಆಯ್ಕೆ ಬಯಸಿದ್ದಾರೆ.

ಇನ್ನು ವಿಧಾಸಭೆ ಚುನಾವಣೆಯಲ್ಲಿ ಟಿಕೆಟ್ ವಂಚಿತರಾದ ಶಿವಮೊಗ್ಗ ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಗೌಡ, ರಘುನಾಥ್ ಮಲ್ಕಾಪುರೆ, ಪಕ್ಷದ ವಕ್ತಾರೆ ಹಾಗೂ ಮಾಜಿ ಸಂಸದೆ ತೇಜಸ್ವಿನಿ ರಮೇಶ್ ಗೌಡ, ಉದ್ಯಮಿ ಕೆ.ಪಿ.ನಂಜುಂಡಿ, ವಿಧಾನ ಪರಿಷತ್ ಮಾಜಿ ಸದಸ್ಯ ಅಶ್ವಥ್‍ನಾರಾಯಣ, ಪಕ್ಷದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಸೇರಿದಂತೆ ಅನೇಕರು ಆಕಾಂಕ್ಷಿಗಳಾಗಿದ್ದಾರೆ.

ವಿಧಾನಸಭೆಯಲ್ಲಿ ಬಿಜೆಪಿ 104 ಸದಸ್ಯರನ್ನು ಹೊಂದಿರುವುದರಿಂದ ಮೇಲ್ಮನೆಗೆ ಐದು ಸದಸ್ಯರನ್ನು ನೇಮಕ ಮಾಡಲು ಅವಕಾಶವಿದೆ. ಎಲ್ಲರನ್ನು ಸಮಾಧಾನಪಡಿಸಿ ಯಾವುದೇ ರೀತಿಯ ಗೊಂದಲಕ್ಕೆ ಅವಕಾಶವಿಲ್ಲದಂತೆ ಸರ್ವಸಮ್ಮತ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಬಿಜೆಪಿಗೆ ಕಗ್ಗಂಟಾಗಿ ಪರಿಣಮಿಸಿದೆ.

ನಿನ್ನೆ ದೆಹಲಿಗೆ ತೆರಳಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಕೇಂದ್ರದ ಕೆಲವು ಹಿರಿಯ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ. ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಂಬಂಧ ಮಾತುಕತೆ ನಡೆದಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ವಿಧಾನಸಭೆಯಿಂದ ವಿಧಾನಪರಿಷತ್‍ಗೆ ನಡೆಯಲಿರುವ ಚುನಾವಣೆಯಲ್ಲಿ ಜಾತಿ, ಪ್ರಾದೇಶಿಕತೆ, ಪಕ್ಷಕ್ಕೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಅಭ್ಯರ್ಥಿ ಆಯ್ಕೆ ನಡೆಯಲಿದೆ.

ಲಿಂಗಾಯಿತ ಸಮುದಾಯದಿಂದ ಯಡಿಯೂರಪ್ಪನವರ ಆಪ್ತ ರುದ್ರೇಗೌಡ, ದಲಿತ ಸಮುದಾಯದಿಂದ ಡಿ.ಎಸ್.ವೀರಯ್ಯ, ಒಕ್ಕಲಿಗ ಸಮುದಾಯದಿಂದ ತೇಜಸ್ವಿನಿ ರಮೇಶ್ ಗೌಡ ಅಥವಾ ಅಶ್ವಥ್ ನಾರಾಯಣ, ಹಿಂದುಳಿದ ವರ್ಗದಿಂದ ಬಿ.ಜೆ.ಪುಟ್ಟಸ್ವಾಮಿ, ಬ್ರಾಹ್ಮಣ ಕೋಟಾದಲ್ಲಿ ಭಾನುಪ್ರಕಾಶ್ ಇಲ್ಲವೇ ಆರ್‍ಎಸ್‍ಎಸ್ ಮೂಲದ ವ್ಯಕ್ತಿಯೊಬ್ಬರು ಅಭ್ಯರ್ಥಿಯಾಗುವ ಸಂಭವವಿದೆ.
ಮೂರ್ನಾಲ್ಕು ದಿನದೊಳಗೆ ಈ ಎಲ್ಲ ಗೊಂದಲಗಳಿಗೆ ಬಿಜೆಪಿ ತೆರೆ ಎಳೆಯಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ