ಮುಖ್ಯಮಂತ್ರಿ ಕುಮಾರಸ್ವಾಮಿ ರಾಜ್ಯದ ಜನರ ಕ್ಷಮೆ ಕೇಳಬೇಕು: ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಆಗ್ರಹ

ಬೆಂಗಳೂರು, ಮೇ 28 -ಜೆಡಿಎಸ್ ಶಾಸಕರನ್ನು ಗೆಲ್ಲಿಸಿರುವ 38 ಕ್ಷೇತ್ರದ ಜನ ನಮ್ಮ ರಾಜ್ಯದವರೇ ಹೊರತು ಬೇರೆ ರಾಜ್ಯದವರಲ್ಲ. ಹೀಗಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಆಗ್ರಹಿಸಿದ್ದಾರೆ.
ಆರ್‍ಆರ್ ನಗರದ ಜಾಲಹಳ್ಳಿ ವಿಲೇಜ್ ಮತಗಟ್ಟೆ 22ರಲ್ಲಿ ಮತದಾನದ ಬಳಿಕ ಮಾತನಾಡಿದ ಅವರು, ನಾನು ರಾಜ್ಯದ ಜನತೆ ಮುಲಾಜಿನಲ್ಲಿ ಇಲ್ಲ ಬದಲಿಗೆ ಕಾಂಗ್ರೆಸ್‍ನ ಮುಲಾಜಿನಲ್ಲಿದ್ದೇನೆ ಎಂಬ ಸಿಎಂ ಹೇಳಿಕೆಗೆ ಅಶೋಕ್ ತಿರುಗೇಟು ನೀಡಿದರು.

ನಾನು ಮತದಾನ ಮಾಡಿದ್ದೇನೆ. ಎಲ್ಲರೂ ತಮ್ಮ ಹಕ್ಕನ್ನು ಚಲಾಯಿಸಿ. ಬೇಗ ಬಂದು ಮತದಾನ ಮಾಡಿ ಎಂದು ಇದೇ ವೇಳೆ ಕರೆ ನೀಡಿದರು.
ಕಾಂಗ್ರೆಸ್ ಅಭ್ಯರ್ಥಿಯ ಅಕ್ರಮದಿಂದಾಗಿ ಚುನಾವಣೆ ಮುಂದೂಡಿಕೆಯಾಗಿತ್ತು. ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನಗೂ ಅಕ್ರಮಗಳಿಗೂ ಬಿಡಿಸಲಾಗದ ನಂಟಿದೆ ಎಂದು ದೂರಿದರು.

ಇದೇ ವೇಳೆ ರೈತರ ಸಾಲಮನ್ನಾ ವಿಚಾರವಾಗಿ ಮಾತನಾಡಿದ ಅವರು, ಕೊಟ್ಟ ಮಾತನ್ನು ಕುಮಾರಸ್ವಾಮಿ ಉಳಿಸಿಕೊಂಡಿಲ್ಲ. ಚುನಾವಣೆಯಲ್ಲಿ ಹೇಳಿದ ಮಾತನ್ನು ಈಡೇರಿಸಿ ಅಂತ ಕೇಳುತ್ತಿದ್ದೇವೆ. ರೈತರಿಗೆ ದನಿಯಾಗಲು ರಾಜ್ಯ ಬಂದ್‍ಗೆ ಬೆಂಬಲ ಸೂಚಿಸಿದ್ದೇವೆ ಎಂದರು.
ಕಾಂಗ್ರೆಸ್‍ನವರು ಇನ್ಮುಂದೆ ಪದ್ಮಾನಾಭನಗರಕ್ಕೆ ಪಲಾಯನ ಮಾಡ್ತಾರೆ. ಯಾಕಂದ್ರೆ ಜೆಡಿಎಸ್‍ನ ಕೈಯಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ಜೆಡಿಎಸ್‍ನವರು ಧರ್ಮ ರಾಜಕಾರಣ ಮಾಡುತ್ತಿದ್ದಾರೆ. ಅವರ ಸಿದ್ಧಾಂತಗಳೇ ಬೇರೆ. ಬೇರೆ ಪಕ್ಷಗಳ ಸಿದ್ಧಾಂತವೇ ಬೇರೆ. ಮಾಜಿ ಸಿಎಂ ಸಿದ್ದರಾಮಯ್ಯ ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ ಎಂದು ಕಿಡಿಕಾರಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ