ದುಬೈ, ಮೇ 21- ಭಾರತೀಯ ಮೂಲದ ಕ್ರೈಸ್ತ ಸಮುದಾಯಕ್ಕೆ ಸೇರಿದ ಉದ್ಯಮಿಯೊಬ್ಬರು ನೌಕರರ ಪ್ರಾರ್ಥನೆಗೆಂದು ಯುಎಇಯಲ್ಲಿ ಮಸೀದಿ ಕಟ್ಟಿಸಿಕೊಟ್ಟಿದ್ದಾರೆ. ಇನ್ನು ಈ ಮಸೀದಿ ಮುಸ್ಲಿಂ ಬಾಂಧವರ ಪವಿತ್ರ ಹಬ್ಬ ರಂಜಾನ್ ಪ್ರಾರ್ಥನೆಗೆ ಅನುಕೂಲವಾಗಲಿದೆ.
ಯುಎಇಯಲ್ಲಿ ಉದ್ಯಮ ನಡೆಸುತ್ತಿರುವ ಭಾರತೀಯ ಮೂಲದ ಉದ್ಯಮಿ ಸಜಿ ಚೆರಿಯನ್ ನೌಕರರ ಪ್ರಾರ್ಥನೆಗೆಂದು ಸುಮಾರು 2.4 ಕೋಟಿ ರೂ. ವೆಚ್ಚದಲ್ಲಿ ಮಸೀದಿ ನಿರ್ಮಿಸಿದ್ದಾರೆ. 49 ವರ್ಷದ ಸಜಿ ಚೆರಿಯನ್ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
2003ರಲ್ಲಿ ಯುಎಇಗೆ ತೆರಳಿದ್ದ ಕೇರಳದ ಕಯಾಮುಕುಲಂ ಸಜಿ ಚೆರಿಯನ್ ಇಂದು ಕೋಟ್ಯಂತರ ರೂ. ಮೌಲ್ಯದ ಉದ್ಯಮ ಮುನ್ನಡೆಸುತ್ತಿದ್ದು, ಯಶಸ್ವಿ ಉದ್ಯಮಿಗಳ ಸಾಲಿನಲ್ಲಿ ನಿಂತಿದ್ದಾರೆ. ಅಲ್ ಹಯಾಲ್ ಇಂಡಸ್ಟ್ರಿಯಲ್ ಏರಿಯಾದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಪ್ರಾರ್ಥನೆಗೆಂದು ಮಸೀದಿ ಇರುವ ಮತ್ತೊಂದು ಪ್ರದೇಶಕ್ಕೆ ಹೋಗುತ್ತಿದ್ದರು. ಇದನ್ನರಿತ ಸಜಿ ಚೆರಿಯನ್ ನೌಕರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಮಸೀದಿ ನಿರ್ಮಿಸಲು ತೀರ್ಮಾನಿಸಿದರು.
ಸಜಿ ಚೆರಿಯನ್ ಮಸೀದಿ ನಿರ್ಮಾಣಕ್ಕಾಗಿ 2.4 ಕೋಟಿ ರೂ. ವ್ಯಯಿಸಿದ್ದಾರೆ. ಕ್ರೈಸ್ತರಾಗಿರುವ ಚೆರಿಯನ್ ಕಾರ್ಯಕ್ಕೆ ಕೈಜೋಡಿಲು ಸ್ಥಳೀಯಾಡಳಿತವೂ ಮುಂದಾಗಿತ್ತು. ಆದರೆ, ಇದೆಲ್ಲವನ್ನೂ ನಯವಾಗಿ ನಿರಾಕರಿಸಿದ ಸಜಿ ಚೆರಿಯನ್, ತಮ್ಮ ಸ್ವಂತ ಹಣದಿಂದಲೇ ಮಸೀದಿ ನಿರ್ಮಾಣ ಕಾರ್ಯ ಪೂರೈಸಿದ್ದಾರೆ.