ಬೆಂಗಳೂರು, ಮೇ 17- ಬಹುಮತದ ಕೊರತೆ ಇದ್ದಾಗ್ಯೂ ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಅವಕಾಶ ನೀಡಿದ್ದನ್ನು ವಿರೋಧಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್ ಒಗ್ಗೂಡಿ ಜಂಟಿಯಾಗಿ ಇಂದು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಕಪ್ಪು ಪಟ್ಟಿ ಮತ್ತು ಗಾಂಧಿ ಟೋಪಿ ಧರಿಸಿ ಧರಣಿ ಸತ್ಯಾಗ್ರಹ ನಡೆಸಿದವು.
ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಗುಲಾಬ್ ನಬಿ ಆಜಾದ್, ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಎಚ್.ಡಿ.ಕುಮಾರ ಸ್ವಾಮಿ, ಎಐಸಿಸಿ ಪ್ರಧಾನಕಾರ್ಯದರ್ಶಿ ಹಾಗೂ ರಾಜ್ಯ ಕಾಮಗ್ರೆಸ್ ಉಸ್ತುವಾರಿ ನಾಯಕ ಕೆ.ಸಿ.ವೇಣುಗೋಪಾಲ್, ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಶೋಕ್ ಗೆಲ್ಹೋಟ್, ಮುಖಂಡರಾದ ರಾಮಲಿಂಗಾರೆಡ್ಡಿ, ಆರ್.ವಿ.ದೇಶಪಾಂಡೆ, ಎಸ್.ಆರ್.ಪಾಟೀಲ್, ಕೆ.ಸಿ.ಕೊಂಡಯ್ಯ, ಎಚ್.ಕೆ.ಪಾಟೀಲ್ ಸೇರಿದಂತೆ ಕಾಂಗ್ರೆಸ್‍ನ ಎಲ್ಲಾ 78 ಮಂದಿ ಶಾಸಕರು, ಜೆಡಿಎಸ್‍ನ ಮುಖಂಡರು, ವಿಧಾನಪರಿಷತ್ ಸದಸ್ಯರು, ಸಂಸದರು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.
ಇಂದು ಬೆಳಗ್ಗೆ ರಾಜಭವನದಲ್ಲಿ ಬಿ.ಎಸ್.ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸುವ ಸಂದರ್ಭಕ್ಕೆ ಸರಿಯಾಗಿ ಕಾಂಗ್ರೆಸ್‍ನ ನಾಯಕರು ವಿಧಾನಸೌಧ ಮತ್ತು ವಿಕಾಸಸೌಧದ ನಡುವಿರುವ ಗಾಂಧಿ ಪ್ರತಿಮೆ ಬಳಿಗೆ ಆಗಮಿಸಿದರು.
ಆಪರೇಷನ್ ಕಮಲದಿಂದ ಭೀತಿಗೊಳಗಾಗಿರುವ ಕಾಂಗ್ರೆಸ್ ನಿನ್ನೆ ರಾತ್ರಿ ಶಾಸಕರನ್ನು ಬೆಂಗಳೂರಿನ ಹೊರ ವಲಯದ ಖಾಸಗಿ ರೆಸಾರ್ಟ್‍ಗೆ ಕರೆದೊಯ್ದಿದ್ದು, ಇಂದು ಬೆಳಗ್ಗೆ ಬಿಎಸ್‍ವೈ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಎಲ್ಲಾ ಶಾಸಕರನ್ನು ವಾಸಪ್ ಕರೆತಂದು ವಿಧಾನಸೌಧ ಮುಂದಿನ ಗಾಂಧಿ ಪ್ರತಿಮೆ ಎದುರು ಧರಣಿ ಕೂರಿಸಿದರು. ಈ ವೇಳೆ ಪ್ರಮುಖ ನಾಯಕರು ಸೇರಿದಂತೆ ಪ್ರಮುಖ ನಾಯಕರು ತೋಳಿಗೆ ಕಪ್ಪುಪಟ್ಟಿ ಧರಿಸಿದ್ದು, ಗಾಂಧಿ ಟೋಪಿ ಹಾಕಿ ಪ್ರತಿಭಟನೆ ಮಾಡಿದರು.
ಧರಣಿ ಸ್ಥಳಕ್ಕೆ ಮಾಜಿ ಪ್ರಧಾನಿ ದೇವೇಗೌಡರು ಸ್ಥಳಕ್ಕೆ ಆಗಮಿಸುವ ಸಂದರ್ಭದಲ್ಲಿ ಅವರಿಗೆ ಎದುರಾದ ಮಾಜಿ ಸಚಿವರಾದ ರಮೇಶ್‍ಕುಮಾರ್, ಎಂ.ಕೃಷ್ಣಪ್ಪ ಮತ್ತಿತರ ಶಾಸಕರನ್ನು ಆತ್ಮೀಯವಾಗಿ ಮಾತನಾಡಿಸುತ್ತಾ ಜತೆಯಲ್ಲೇ ಬಂದು ಧರಣಿಯಲ್ಲಿ ಪಾಲ್ಗೊಂಡರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ದೇವೇಗೌಡರು ಪ್ರಸ್ತುತ ರಾಜಕೀಯ ವಿಚಾರಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು. ಇವರೊಂದಿಗೆ ಜೆಡಿಎಸ್‍ನ ಶರವಣ, ವೈ.ಎಸ್.ವಿ.ದತ್ತ ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡರು.
ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‍ಗುಂಡೂರಾವ್ ರಾಜ್ಯಪಾಲರ ನಡವಳಿಕೆಯನ್ನು ಖಂಡಿಸಿದರು. ಜತೆಗೆ ಬಹುಮತ ಇಲ್ಲದಿರುವುದು ಸ್ಪಷ್ಟವಾಗಿ ಗೋಚರಿಸಿದೆ. ಆದರೂ ಯಡಿಯೂರಪ್ಪ ಅವರಿಗೆ ಪ್ರಮಾಣವಚನ ಸ್ವೀಕಾರಕ್ಕೆ ಅವಕಾಶ ನೀಡಿ ಅಸಂವಿಧಾನಿಕವಾಗಿ ನಡೆದು ಕೊಂಡಿದ್ದಾರೆ. ಇದು ಪ್ರಜಾಪ್ರಭುತ್ವದ ವಿರೋಧಿ ಕೃತ್ಯವಾಗಿದೆ. ಕೇಂದ್ರ ತನ್ನ ಅಧಿಕಾರ ದುರುಪಯೋಗಪಡಿಸಿಕೊಂಡು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ ಎಂದರು.
ಹುಮತ ಸಾಬೀತು ಪಡಿಸಲು 15 ದಿನಗಳ ಕಾಲವಕಾಶ ನೀಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಈ ನಡುವೆ ಪ್ರತಿಪಕ್ಷಗಳ ಶಾಸಕರನ್ನು ಅಪಹರಿಸಬಹುದು. ಬ್ಲಾಕ್‍ಮೇಲ್ ಮಾಡಬಹುದು, ಅಧಿಕಾರದ ಆಮಿಷ ಒಡ್ಡಬಹುದು. ಈ ಎಲ್ಲಾ ಸಾಧ್ಯತೆಗಳಿಗೆ ರಾಜ್ಯಪಾಲರು ಅವಕಾಶ ಮಾಡಿಕೊಟ್ಟಿದ್ದಾರೆ.
ಈ ರೀತಿಯ ನಡವಳಿಕೆಗಳ ಬಗ್ಗೆ ಮಾಧ್ಯಮಗಳು ಜಾಣ ಮೌನ ವಹಿಸಿರುವುದು, ಕಣ್ಣೆದುರಿಗೆ ತಪ್ಪು ನಡೆಯುತ್ತಿದ್ದರೂ ಎಲ್ಲಿಯೂ ವಿಮರ್ಶೆ ನಡೆಯುತ್ತಿಲ್ಲ. ಆದರೆ, ಕಾಂಗ್ರೆಸ್‍ನಲ್ಲಿ ಎಷ್ಟು ಜನ ಇದ್ದಾರೆ, ಎಷ್ಟು ಜನ ಇರುತ್ತಾರೆ ಎಂಬ ಅಸಂಬದ್ಧ ಪ್ರಶ್ನೆಗಳನ್ನು ಕೇಳಲಾಗುತ್ತಿದೆ ಎಂದರು.
ಮಾಜಿ ಸಚಿವ ರಮೇಶ್‍ಕುಮಾರ್ ಮಾತನಾಡಿ, ಅಧಿಕಾರ ದುರುಪಯೋಗಪಡಿಸಿಕೊಂಡು ಪ್ರಜಾಪ್ರಭುತ್ವವನ್ನು ದುರ್ಬಳಕೆ ಮಾಡಬಹುದು ಎಂಬುದನ್ನು ಬಿಜೆಪಿ ತೋರಿಸಿಕೊಟ್ಟಿದೆ. ಇಂತಹ ಅಸಂವಿಧಾನಿಕ ನಡವಳಿಕೆ ಹಾಗೂ ನಿರ್ಧಾರಗಳನ್ನು ಸಹಿಸಲು ಸಾಧ್ಯವಿಲ್ಲ. ಶಾಸಕರೇನು ಬಿಟ್ಟಿ ಬಿದ್ದಿದ್ದಾರೆಯೇ ಖರೀದಿ ಮಾಡಲು ಎಂದು ಪ್ರಶ್ನಿಸಿದರು.