ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ದಿನಗಣನೆ ಆರಂ¨s

 

ಬೆಂಗಳೂರು, ಮೇ 17- ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ವಿಶ್ವಾಸಮತ ಯಾಚನೆಗೆ 15 ದಿನಗಳ ಗಡುವು ಇರುವ ಬೆನ್ನಲ್ಲೆ ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ದಿನಗಣನೆ ಆರಂಭಗೊಂಡಿದೆ.

ಬಿಜೆಪಿ ಅಭ್ಯರ್ಥಿ ಬಿ.ಎನ್.ವಿಜಯ್‍ಕುಮಾರ್ ಅಕಾಲಿಕ ನಿಧನದಿಂದ ಮುಂದೂಡಲಾಗಿದ್ದ ಜಯನಗರ ವಿಧಾನಸಭಾ ಕ್ಷೇತ್ರಕ್ಕೆ ನಾಳೆಯಿಂದ ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದೆ. ನಾಮಪತ್ರ ವಾಪಸ್ ಪಡೆಯಲು ಮೇ 25 ಕೊನೆ ದಿನವಾಗಿದ್ದು, ಜೂನ್ 11ರಂದು ಚುನಾವಣೆ ನಡೆಯಲಿದೆ.

ವೋಟರ್ ಐಡಿ ಅಕ್ರಮ ಸಂಗ್ರಹಣೆ ಪ್ರಕರಣದ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಕ್ಕೆ ಮೇ 28ರಂದು ಚುನಾವಣೆ ನಡೆಯಲಿದೆ.

ಮೇ 28 ಮತ್ತು ಜೂನ್ 11ರಂದು ನಡೆಯಲಿರುವ ರಾಜರಾಜೇಶ್ವರಿನಗರ ಮತ್ತು ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಜೂನ್ 12ರಂದು ಹೊರಬೀಳಲಿದೆ.

ವಿಶ್ವಾಸಮತ ಯಾಚನೆಗೆ ಶಾಸಕರ ಕೊರತೆ ಎದುರಿಸುತ್ತಿರುವ ಬಿಜೆಪಿ ರಾಜರಾಜೇಶ್ವರಿನಗರ ಮತ್ತು ಜಯನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ರಣತಂತ್ರ ರೂಪಿಸುತ್ತಿದೆ.

ಎಸ್.ಕೆ.ನಟರಾಜ್‍ಗೆ ಲಕ್: ಬಿ.ಎನ್.ವಿಜಯ್‍ಕುಮಾರ್ ನಿಧನದಿಂದ ಮುಂದೂಡಲ್ಪಟ್ಟಿರುವ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಮಾತ್ರ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಗೆಲ್ಲುವ ಸಮರ್ಥ ಅಭ್ಯರ್ಥಿಗೆ ಮಣೆ ಹಾಕಲು ಕೇಸರಿ ಪಡೆ ತೀರ್ಮಾನಿಸಿದೆ.

ಸ್ಥಳೀಯವಾಗಿ ಪ್ರಭಾವ ಹೊಂದಿರುವ ಮಾಜಿ ಮೇಯರ್ ಹಾಗೂ ಹಿರಿಯ ಬಿಜೆಪಿ ಮುಖಂಡ ಎಸ್.ಕೆ.ನಟರಾಜ್ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ.

ಕ್ಷೇತ್ರದಲ್ಲಿ ನಟರಾಜ್ ಹೊಂದಿರುವ ಜನಮನ್ನಣೆಯನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಟಿಕೆಟ್ ನೀಡಬೇಕು ಎಂಬ ಮಾತುಗಳು ಕೇಳಿಬರುತ್ತಿವೆ.

ಇದರ ಮಧ್ಯೆ ವಿಧಾನ ಪರಿಷತ್ ಸದಸ್ಯೆ ತಾರಾ ಅನುರಾಧ ಅವರನ್ನು ಕಣಕ್ಕಿಳಿಸುವ ಬಗ್ಗೆಯೂ ಮಾತುಕತೆ ನಡೆಯುತ್ತಿದೆ ಎನ್ನಲಾಗಿದ್ದು, ಬ್ರಾಹ್ಮಣ ಸಮುದಾಯವನ್ನು ಪ್ರತಿನಿಧಿಸುವ ಬಿಬಿಎಂಪಿ ಮಾಜಿ ಸದಸ್ಯ ಸಿ.ಕೆ.ರಾಮಮೂರ್ತಿ ಅವರನ್ನು ಪರಿಗಣಿಸಬೇಕು ಎಂಬ ಬೇಡಿಕೆಯೂ ಇದೆ.

ಒಟ್ಟಾರೆ ಈ ಮೂವರಲ್ಲಿ ಒಬ್ಬರು ಜಯನಗರದಲ್ಲಿ ಬಿಜೆಪಿ ಅಭ್ಯರ್ಥಿಯಾಗುವುದು ಖಚಿತಪಟ್ಟಿದೆ.

ರಾಜರಾಜೇಶ್ವರಿನಗರದಲ್ಲಿ ಚುನಾವಣೆಯನ್ನು ಮುಂದೂಡಿರುವುದರಿಂದ ಈಗಾಗಲೇ ನಾಮಪತ್ರ ಸಲ್ಲಿಸಿರುವ ಕಾಂಗ್ರೆಸ್‍ನ ಮುನಿರತ್ನ, ಬಿಜೆಪಿಯ ತುಳಸಿ ಮುನಿರಾಜುಗೌಡ ಹಾಗೂ ಜೆಡಿಎಸ್‍ನ ರಾಮಚಂದ್ರ ಅವರೇ ಅಭ್ಯರ್ಥಿಗಳಾಗಿ ಸ್ಪರ್ಧಿಸಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ