ನವದೆಹಲಿ, ಮೇ 16-ಕಾವೇರಿ ನಿರ್ವಹಣಾ ಯೋಜನೆ ಕರಡನ್ನು ಅಂತಿಮಗೊಳಿಸುವುದಕ್ಕೆ ತಡೆ ನೀಡಬೇಕೆಂದು ಕೋರಿ ಕರ್ನಾಟಕ ಸಲ್ಲಿಸಿದ್ದ ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ತಿರಸ್ಕರಿಸಿದೆ.
ಕರ್ನಾಟಕ ರಾಜ್ಯದಲ್ಲಿ ಚುನಾವಣಾ ಫಲಿತಾಂಶ ಪ್ರಕಟಗೊಂಡು ಹೊಸ ಸರ್ಕಾರ ರಚನೆ ಪ್ರಕ್ರಿಯೆ ನಡೆಯುತ್ತಿರುವುದರಿಂದ ಕಾವೇರಿ ಸ್ಕೀಂ ಕರಡನ್ನು ಅಂತಿಮಗೊಳಿಸುವುದಕ್ಕೆ ತಡೆ ನೀಡಬೇಕೆಂದು ಕರ್ನಾಟಕ ಸರ್ವೋಚ್ಛ ನ್ಯಾಯಾಲಯವನ್ನು ಕೋರಿತ್ತು.
ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ರಾಜ್ಯದ ಅರ್ಜಿಯನ್ನು ವಜಾಗೊಳಿಸಿತು. ಅಲ್ಲದೇ, ನಾಲ್ಕು ರಾಜ್ಯಗಳ(ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ) ನಡುವೆ ಕಾವೇರಿ ನೀರು ಹಂಚಿಕೆ ಕುರಿತು ಆಗ್ಗಿಂದಾಗ್ಗೆ (ಕಾಲ ಕಾಲಕ್ಕೆ) ನಿರ್ದೇಶನಗಳನ್ನು ನೀಡಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡುವ ಕಾವೇರಿ ನಿರ್ವಹಣಾ ಯೋಜನೆ ಕರಡಿನ ನಿಬಂಧನೆಯನ್ನು ಮಾರ್ಪಾಡು ಮಾಡುವಂತೆಯೂ ಸುಪ್ರೀಂಕೋರ್ಟ್ ಕೇಂದ್ರಕ್ಕೆ ಸೂಚಿಸಿತು.
ಈ ನಿಬಂಧನೆಯನ್ನು ಮಾರ್ಪಾಡು ಮಾಡಬೇಕು ಹಾಗೂ ಅನುಮೋದನೆಗಾಗಿ ಅದನ್ನು ನಾಳೆ ಸಲ್ಲಿಸಬೇಕೆಂದು ಪೀಠವು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರಿಗೆ ಸೂಚನೆ ನೀಡಿತು.
ಕರ್ನಾಟಕದಲ್ಲಿ ನೂತನ ಸರ್ಕಾರ ರಚನೆ ಪ್ರಕ್ರಿಯೆ ನಡೆಯುತ್ತಿರುವುದರಿಂದ ಜುಲೈ ಮೊದಲ ವಾರದವರೆಗೂ ಕಾವೇರಿ ಸ್ಕೀಂ ಕರಡನ್ನು ಅಂತಿಮಗೊಳಿಸಬಾರದು ಎಂದು ರಾಜ್ಯದ ಪರವಾಗಿ ಹಿರಿಯ ವಕೀಲ ಶ್ಯಾಮ್ ದಿವಾನ್ ಕೋರಿಕೆಗೆ ಸುಪ್ರೀಂಕೋರ್ಟ್ ಸಮ್ಮತಿಸಲಿಲ್ಲ. ಯೋಜನೆ ಕರಡು ಸಿದ್ಧಗೊಳಿಸಿರುವುದು ಕೇಂದ್ರ ಸರ್ಕಾರ ಎಂಬ ಕಾರಣ ನೀಡಿ ಪೀಠವು ಅರ್ಜಿಯನ್ನು ತಿರಸ್ಕರಿಸಿದೆ.
ಮಾರ್ಪಡಿತ ಯೋಜನೆ ಕರಡನ್ನು ಪರಿಗಣಿಸಲು ನಾಳೆಗೆ ದಿನಾಂಕ ಗೊತ್ತುಪಡಿಸಿರುವ ಪೀಠವು, ನಾಲ್ಕು ರಾಜ್ಯಗಳ ನಡುವೆ ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಫೆಬ್ರವರಿ 16ರಂದು ನೀಡಿರುವ ಆದೇಶಕ್ಕೆ ಬದ್ಧವಾಗಿರುವಂತೆಯೂ ತಿಳಿಸಿದೆ.