ಬೆಂಗಳೂರು,ಮೇ 13
ರಾಜ್ಯ ವಿಧಾನಸಭೆ ಚುನಾವಣೆಗೆ ಮತದಾನ ಮುಕ್ತಾಯಗೊಂಡಿದ್ದು, ಮತಯಂತ್ರಗಳು ಸ್ಟ್ರಾಂಗ್ ರೂಮ್ ನಲ್ಲಿ ಭದ್ರವಾಗಿವೆ. ಈ ಮಧ್ಯೆ ಮತದಾನೋತ್ತರ ಸಮೀಕ್ಷೆಗಳು ಈ ಬಾರಿ ಅತಂತ್ರ ವಿಧಾನಸಭೆ ಎಂದು ಭವಿಷ್ಯ ನುಡಿದಿವೆ. ಆದಾಗ್ಯೂ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ತಮ್ಮ ಪಕ್ಷ ಬಹುಮತ ಪಡೆದು ತಾವೇ ಸರ್ಕಾರ ರಚಿಸುವ ವಿಶ್ವಾಸದಲ್ಲಿವೆ.
ಮೇ 17 ರಂದು ಬಿಜೆಪಿ ಸರ್ಕಾರ ರಚಿಸಲಿದ್ದು ತಾವು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದೇನೆ ಎಂದು ಯಡಿಯೂರಪ್ಪ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಯಡಿಯೂರಪ್ಪ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ನಾವು 120 ಸೀಟುಗಳನ್ನು ಗೆದ್ದು ಸರ್ಕಾರ ರಚಿಸುತ್ತೇವೆ ಎಂದು ಭರವಸೆ ವ್ಯಕ್ತ ಪಡಿಸಿದ್ದಾರೆ.
ಸಮಾಜದ ಎಲ್ಲಾ ಹಿಂದುಳಿದ ವರ್ಗಗಳ ಜನರು ಕಾಂಗ್ರೆಸ್ ಗೆ ಬೆಂಬಲ ನೀಡಿದ್ದು, ಸರ್ಕಾರ ರಚನೆಗೆ ಬೇಕಾಗುವ ಬಹುಮತ ತಮಗೆ ದೊರೆಯಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಇನ್ನೂ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ವಿರುದ್ದ ವಾಗ್ದಾಳಿ ನಡೆಸಿದ ಸಿಎಂ ಐಟಿ ದಾಳಿ ಬಿಜೆಪಿಯ ರಾಜಕೀಯ ಪಿತೂರಿಯಾಗಿದೆ ಎಂದು ಆರೋಪಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಜಿ.ಟಿ ದೇವೇಗೌಡ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತದಾರರಿಗೆ ಹಣ ಹಂಚಿಕೆ ಮಾಡಿದ್ದಾರೆ ಎಂದು ದೂರಿದ್ದಾರೆ.
ಶಿಕಾರಿಪುರದಲ್ಲಿ ಮಾತನಾಡಿದ ಯಡಿಯೂರಪ್ಪ ಕಾವು 50 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುವುದಾಗಿ ಹಾಗೂ 145 ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಜಯ ಸಾಧಿಸುವ ಭರವಸೆ ವ್ಯಕ್ತ ಪಡಿಸಿದ್ದಾರೆ.
ಮೇ 15 ರಂದು ಸಂಜೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಹಾಗೂ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳನ್ನು ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿಸುವುದಾಗಿ ಯಡಿಯೂರಪ್ಪ ಹೇಳಿದ್ದಾರೆ,
ಇದೇ ವೇಳೆ ಮಾತನಾಡಿರುವ ಈಶ್ವರಪ್ಪ ಹಿಂದೂ ಸಮಾಜ ಬಿಜೆಪಿಯನ್ನು ಬೆಂಬಲಿಸಲಿದ್ದು, 130 ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆ ಎಂದು ಹೇಳಿದ್ದಾರೆ. ಮೋದಿ ರ್ಯಾಲಿ ಮತದಾರರ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡ ಮಾತನಾಡಿ ಜೆಡಿಎಸ್ ಈ ಬಾರಿ ಸರ್ಕಾರ ರಚಿಸುವುದಾಗಿ ತಿಳಿಸಿದ್ದಾರೆ. ಮಾಜಿ ಸಿಎಂ ಎಚ್.ಡಿ ಕುಮಾರ ಸ್ವಾಮಿ ಅವರ ಮೇಲೆ ರಾಜ್ಯದ ಜನತೆ ವಿಶ್ವಾಸ ಇಟ್ಟಿದ್ದು, ಜನ ಕುಮಾರ ಸ್ವಾಮಿ ಅವರು ಸಿಎಂ ಆಗುವುದನ್ನು ನೋಡಲು ಬಯಸಿದ್ದಾರೆ.
ಬೇರೆ ಪಕ್ಷಗಳ ಹಾಗೆ ನಾವು ಹಣ ಅಥವಾ ಉಡುಗೊರೆ ಅಥವಾ ಸಾರಾಯಿ ಹಂಚುತ್ತಿಲ್ಲ, ನಮಗೆ ಒಕ್ಕಲಿಗರ ಮತದಾರರ ಸಂಪೂರ್ಣ ಬೆಂಬಲವಿದೆ. ಹಳೇ ಮೈಸೂರು ಭಾಗದಲ್ಲಿ ಉತ್ತಮ ಬೆಂಬಲ ಸಿಗುತ್ತದೆ. ಒಂದು ವೇಳೆ ಅತಂತ್ರ ವಿಧಾನ ಸಭೆ ನಿರ್ಮಾಣವಾದರೇ ಸರ್ಕಾರ ರಚಿಸುವಲ್ಲಿ ಜೆಡಿಎಸ್ ಪ್ರಮುಖ ಪಾತ್ರ ವಹಿಸುತ್ತದೆ. ಕಾಂಗ್ರೆಸ್ ಅಥವಾ ಬಿಜೆಪಿ ಜೊತೆ ಮೈತ್ರಿಯ ಬಗ್ಗೆ ಗೌಡರು ತುಟಿ ಬಿಚ್ಚಿಲ್ಲ.