ಬಿಎಸ್ ಯಡಿಯೂರಪ್ಪಗೆ ಗೆಲುವಿನ ವಿಶ್ವಾಸ: ಪ್ರಮಾಣ ವಚನದ ದಿನಾಂಕದ ಬಗ್ಗೆ ಪಕ್ಷದ ವರಿಷ್ಠರ ಜತೆ ಚರ್ಚೆ ನಡೆಸುತ್ತೇನೆ ಎಂದ ಬಿಜೆಪಿ ರಾಜ್ಯಾಧ್ಯಕ್ಷ

ಬೆಂಗಳೂರು:ಮೇ-13: ವಿಧಾನಸಭೆ ಚುನಾವಣೆ ಮುಗಿಯುತ್ತಿದ್ದಂತೆಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದು, ಪ್ರಮಾಣ ವಚನ ದಿನಾಂಕದ ಬಗ್ಗೆ ಪ್ರಧಾನಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜತೆ ಚರ್ಚೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ಇಂದು ಮತ್ತು ನಾಳೆ ಬೆಂಗಳೂರಿನಲ್ಲಿದ್ದು, ಕೇಸರಿ ಪಕ್ಷದ ಕಾರ್ಯಕರ್ತರನ್ನು ನಾನು ಭೇಟಿಯಾಗುತ್ತೇನೆ. ನಂತರ, 15 ರಂದು ಪ್ರಧಾನಿ ಮೋದಿ ಹಾಗೂ ಅಮಿತ್ ಷಾರನ್ನು ಭೇಟಿಯಾಗಿ ಪ್ರಮಾಣ ವಚನ ದಿನಾಂಕದ ಬಗ್ಗೆ ಚರ್ಚಿಸುತ್ತೇನೆ. ನಂತರ ಬಳಿಕ ಶಾಸಕಾಂಗ ಸಭೆ ನಡೆಸುತ್ತೇನೆ ಎಂದು ಹೇಳಿದ್ದಾರೆ.

ನನಗೆ ಯಾವುದೇ ಭಯ ಇಲ್ಲ. ಯಾವುದೇ ಪಕ್ಷದ ಸಹಕಾರ ನಮಗೆ ಬೇಕಾಗಿಲ್ಲ. ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಲಿದೆ. ಬೇಕಾದ್ರೆ ನಿಮಗೆ ಬರೆದುಕೊಡ್ತೀನಿ ನಮಗೆ 125 ರಿಂದ 130 ಸೀಟ್ ಸಿಗಲಿದೆ. ಇದನ್ನು, ದೇವರ ಮುಂದೆ ಇಟ್ಟು ಪೂಜೆ ಮಾಡಿ ಬರೆದುಕೊಡ್ತೀನಿ. ನಾನು ಹೇಳಿದ ಮಾತು ಯಾವತ್ತೂ ಸುಳ್ಳು ಆಗಿಲ್ಲ. ನಾನೇ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತೇನೆ ಎಂದು ಬಿಎಸ್‌ವೈ ಹೇಳಿದ್ದಾರೆ.

ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ರಾಜ್ಯದ ಜನತೆ ಸ್ಪಷ್ಟ ಬಹುಮತ ಕೊಡಲಿದ್ದಾರೆ. ಮತದಾನ ಮಾಡಿದ್ದ ರಾಜ್ಯದ ಜನರಿಗೆ ವಂದನೆಗಳು. ರಾಜ್ಯದಲ್ಲಿ ಅತ್ಯಂತ ಉತ್ಸಾಹದಿಂದ ಮತ ಚಲಾವಣೆಯಾಗಿದ್ದು, ಶೇಕಡ 71 ರಷ್ಟು ಮತದಾನವಾಗಿದೆ. ಸಿದ್ದರಾಮಯ್ಯ ಸರ್ಕಾರ ಭ್ರಷ್ಟ, ರೈತ ವಿರೋಧಿಯಾಗಿದೆ. ಕಾಂಗ್ರೆಸ್ ಪಕ್ಷ ಈ ಬಾರಿ 70ಕ್ಕೂ ಹೆಚ್ಚು ಸೀಟ್‌ಗಳನ್ನು ಕೂಡ ಗೆಲ್ಲುವುದಿಲ್ಲ. ಬಿಜೆಪಿ 130ಕ್ಕೂ ಅಧಿಕ ಸೀಟುಗಳಲ್ಲಿ ಜಯಗಳಿಸಲಿದೆ. ಹಾಗೂ ಜೆಡಿಎಸ್‌ ಕೇವಲ 22ರಿಂದ 23 ಸೀಟುಗಳನ್ನಷ್ಟೇ ಪಡೆದುಕೊಳ್ಳಲಿದೆ. ಅಲ್ಲದೆ, ಪಕ್ಷೇತರರಿಗೆ 2 ರಿಂದ 4 ಸೀಟುಗಳಷ್ಟೇ ಲಭಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ