ರಾಜ್ಯ ವಿಧಾನಸಭೆ ಚುನಾವಣೆ: ಬಹುತೇಕ ಶಾಂತಿಯುತ ಮತದಾನ

ಬೆಂಗಳೂರು, ಮೇ 12- ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬೆಳಗ್ಗಿನಿಂದಲೇ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಬಂದು ಮತಚಲಾಯಿಸಿದ್ದು, ಬಹುತೇಕ ಶಾಂತಿಯುತ ಮತದಾನವಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‍ಕುಮಾರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ 222 ವಿಧಾನಸಭಾ ಕ್ಷೇತ್ರಗಳಲ್ಲೂ ಸುಸೂತ್ರವಾಗಿ ಮತದಾನ ನಡೆಯುತ್ತಿದೆ. ಕೆಲವೊಂದು ಮತಗಟ್ಟೆಗಳಲ್ಲಿ ತಾಂತ್ರಿಕ ಕಾರಣಗಳಿಂದಾಗಿ ವಿವಿಪ್ಯಾಟ್ ಹಾಗೂ ಮತ ಯಂತ್ರಗಳಲ್ಲಿ ಸಮಸ್ಯೆ ಉಂಟಾಗಿದ್ದು, ತಕ್ಷಣವೇ ಸರಿ ಪಡಿಸಿ ಮತದಾನಕ್ಕೆ ಅನುವು ಮಾಡಿಕೊಡಲಾಗಿದೆ ಎಂದರು.

ಚುನಾವಣಾ ಆಯೋಗವು ಮತದಾನದ ಜಾಗೃತಿಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರ ಫಲವಾಗಿ ಮತದಾರರಲ್ಲಿ ಉತ್ಸಾಹ ಕಂಡು ಬಂದಿದೆ. ಇದೇ ಮೊದಲ ಬಾರಿಗೆ ಸ್ಥಾಪಿಸಿರುವ ಪಿಂಕ್ ಮತಗಟ್ಟೆಗಳಲ್ಲೂ ಮತದಾರರ ಸಂಖ್ಯೆ ಹೆಚ್ಚಳ ಕಂಡು ಬಂದಿತು.

ವಿಕಲಚೇತನರು ಸೇರಿದಂತೆ ಅಗತ್ಯವಿದ್ದವರಿಗೆ ವೀಲ್‍ಚೇರ್ ವ್ಯವಸ್ಥೆಯನ್ನು ಸಹ ಮತಗಟ್ಟೆಗಳಲ್ಲಿ ಮಾಡಲಾಗಿತ್ತು ಎಂದು ಹೇಳಿದರು.
ಮತದಾನ ಸ್ಥಗಿತ:
ಬೆಂಗಳೂರಿನ ಹೆಬ್ಬಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆ ಸಂಖ್ಯೆ 2(ಲೊಟ್ಟೆಗೊಲ್ಲಹಳ್ಳಿ)ರಲ್ಲಿ ಮತದಾನವನ್ನು ಸ್ಥಗಿತಗೊಳಿಸಲಾಗಿದೆ.
ವಿವಿಪ್ಯಾಟ್‍ನಲ್ಲಿ ತಾಂತ್ರಿಕ ದೋಷ ಕಂಡುಬಂದಿರುವ ಹಿನ್ನೆಲೆಯಲ್ಲಿ ಮತದಾನವನ್ನು ಸ್ಥಗಿತಗೊಳಿಸಲಾಗಿದ್ದು, ಭಾರತ ಚುನಾವಣಾ ಆಯೋಗದ ಗಮನಕ್ಕೆ ತರಲಾಗಿದೆ.

ತಾಂತ್ರಿಕ ದೋಷವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ತಂತ್ರಜ್ಞರ ತಂಡದಿಂದ ವಿಚಾರಣೆ ನಡೆಸಲಾಗುತ್ತಿದೆ. ಆಯೋಗ ಕೈಗೊಳ್ಳುವ ನಿರ್ಧಾರದಂತೆ ಈ ಮತಗಟ್ಟೆಯಲ್ಲಿ ಮತದಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಂಜೀವ್‍ಕುಮಾರ್ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ