ಸಿಎಂ ಸಿದ್ಧರಾಮಯ್ಯನವರು ಎರಡು ಕ್ಷೇತ್ರಗಳಲ್ಲಿ ಸೋಲುವುದು ಸೂರ್ಯ-ಚಂದ್ರರಷ್ಟೇ ಸತ್ಯ: ಸಂಸದೆ ಶೋಭಾ ಕರಂದ್ಲಾಜೆ

ಬೆಂಗಳೂರು,ಮೇ7-ಕಳೆದ ಐದು ವರ್ಷಗಳಲ್ಲಿ ಸರ್ವಾಧಿಕಾರಿಯಂತೆ ವರ್ತಿಸಿ ಪಕ್ಷದಲ್ಲಿ ಹಿರಿಯರನ್ನು ಕಡೆಗಣಿಸಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಈ ಬಾರಿ ಎರಡು ಕ್ಷೇತ್ರಗಳಲ್ಲಿ ಸೋಲುವುದು ಸೂರ್ಯ-ಚಂದ್ರರಷ್ಟೇ ಸತ್ಯ ಎಂದು ಸಂಸದೆ ಶೋಭಾ ಕರಂದ್ಲಾಜೆ ಭವಿಷ್ಯ ನುಡಿದಿದ್ದಾರೆ.

ಎರಡೂ ಕ್ಷೇತ್ರದಲ್ಲೂ ಸಿದ್ದರಾಮಯ್ಯ ಸೋಲು
ಚಾಮುಂಡೇಶ್ವರಿ ಹಾಗೂ ಬಾದಾಮಿಯಲ್ಲಿ ಸಿದ್ಧರಾಮಯ್ಯನವರು ಗೆಲ್ಲುವುದಿಲ್ಲ. ಕಾಂಗ್ರೆಸ್ ಪಕ್ಷವನ್ನು ಮನೆಗೆ ಕಳಿಸುವುದರ ಜೊತೆಗೆ ಅವರು ಕೂಡ ಶಾಶ್ವತವಾಗಿಯೇ ಮನೆಗೆ ಹೋಗುತ್ತಾರೆ. ಅವರು ಕಾಂಗ್ರೆಸ್ ಪಕ್ಷದ ಕೊನೆಯ ಮುಖ್ಯಮಂತ್ರಿ ಎಂದು ವ್ಯಂಗ್ಯವಾಡಿದರು.
ಬೆಂಗಳೂರು ಪ್ರೆಸ್‍ಕ್ಲಬ್ -ವರದಿಗಾರರ ಕೂಟ ಏರ್ಪಡಿಸಿದ್ದ ಚಿಂತನ-ಮಂಥನದಲ್ಲಿ ಮಾತನಾಡಿದ ಅವರು, ಮೊದಲು ಚಾಮುಂಡೇಶ್ವರಿಯಲ್ಲೇ ಮಾತ್ರ ಗೆಲ್ಲುತ್ತೇನೆ ಎಂದು ಹೇಳುತ್ತಿದ್ದ ಅವರಿಗೆ ಸೋಲಿನ ಅರಿವು ಗೊತ್ತಾಗುತ್ತಿದ್ದಂತೆ ಬಾದಾಮಿಗೆ ಪಲಾಯನ ಮಾಡಿದರು. ಕಾಂಗ್ರೆಸ್ ಪಕ್ಷ ಗೆದ್ದು ಅಧಿಕಾರಕ್ಕೆ ಬರುವುದಿರಲಿ ಮೊದಲು ಸಿದ್ಧರಾಮಯ್ಯ ಗೆದ್ದು ತೋರಿಸಲಿ ಎಂದು ಸವಾಲು ಎಸೆದರು.

ಐದು ವರ್ಷಗಳಲ್ಲಿ ಭ್ರಷ್ಟಾಚಾರ ರಹಿತ ಹಾಗೂ ಹಗರಣ ರಹಿತ ಆಡಳಿತ ನಡೆಸಿದ್ದೇನೆ ಎಂದು ಹೇಳುವ ಸಿದ್ಧರಾಮಯ್ಯನವರು ಏಕೆ ಬಾದಾಮಿಗೆ ಹೋಗುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿಕೊಂಡಿದ್ದಾರೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಪಕ್ಷದಲ್ಲಿ ಎಲ್ಲರನ್ನು ಕಡೆಗಣಿಸಿ ತಾನೆಯೇ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದ ಅವರಿಗೆ ಈ ಬಾರಿ ರಾಜ್ಯದ ಜನತೆ ತಕ್ಕ ಪಾಠ ಕಲಿಸಿದ್ದಾರೆ. ಮೇ 15ರ ಫಲಿತಾಂಶದವರೆಗೆ ಕಾದು ನೋಡಿ ಎಂದು ಸೂಚ್ಯವಾಗಿ ಹೇಳಿದರು.

ರಾಜ್ಯದ ಜನತೆ ಈ ಸರ್ಕಾರದ ಮೇಲೆ ಸಂಪೂರ್ಣವಾಗಿ ವಿಶ್ವಾಸ ಕಳೆದುಕೊಂಡಿದ್ದಾರೆ. ಜಾತಿ ಮತ್ತು ಧರ್ಮಗಳ ನಡುವೆ ವಿಷಬೀಜ ಬಿತ್ತಿ ರಾಜಕೀಯ ಲಾಭ ಪಡೆಯಲು ಮುಂದಾಗಿದ್ದಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್‍ಗಿಂತ ಸಿದ್ಧರಾಮಯ್ಯನವರ ದುರಾಹಂಕಾರ, ಉಡಾಫೆಯಿಂದ ಜನತೆ ತಿರುಗಿ ಬೀಳಲಿದ್ದಾರೆ ಎಂದರು.

ಪಕ್ಷದೊಳಗಿನ ಹಿರಿಯ ಮೌನ, ಹತಾಶೆ, ಅಸಹಾಯಕತೆ ಕಾಂಗ್ರೆಸ್ ದುಸ್ಥಿತಿಗೆ ಕಾರಣ. ನಾನು, ನನ್ನಿಂದಲೇ ಎಂದು ಬಿಂಬಿಸಿಕೊಳ್ಳುತ್ತಿರುವ ಅವರಿಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ. ಕಾಂಗ್ರೆಸ್ ಫಲಿತಾಂಶಕ್ಕೂ ಮುನ್ನವೇ ಶಸ್ತ್ರ ತ್ಯಾಗ ಮಾಡಲು ಸಜ್ಜಾಗಿದೆ ಎಂದರು.

ನಾವು 138 ಸ್ಥಾನ ಗೆದ್ದು , ಅಧಿಕಾರಕ್ಕೆ ಬರುತ್ತೇವೆ ಎಂದು ಸಿದ್ಧರಾಮಯ್ಯ ಹೇಳುತ್ತಿದ್ದಾರೆ. ಈವರೆಗೂ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ, ಲೋಕಸಭೆ ಸಂಸದೀಯ ನಾಯಕ ಎಂ.ಮಲ್ಲಿಕಾರ್ಜುನ ಖರ್ಗೆ ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಎಲ್ಲಿಯೂ ಹೇಳುತ್ತಿಲ್ಲ. ಆದರೆ ಸಿದ್ಧರಾಮಯ್ಯ ಮಾತ್ರ ಅದ್ಯಾವ ವಿಶ್ವಾಸದಿಂದ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳುತ್ತಿದ್ದಾರೋ ಗೊತ್ತಿಲ್ಲ.ನಿಂತಿಲ್ಲ ನೆಲವೇ ಕುಸಿಯುತ್ತಿರುವಾಗ ಪಕ್ಷವನ್ನು ಅಧಿಕಾರಕ್ಕೆ ತರಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಬಗ್ಗೆ ಉಡಾಫೆಯಾಗಿ ಮಾತನಾಡುತ್ತಾರೆ. ಮತದಾರರ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಚುನಾವಣೆಯಲ್ಲಿ ಕಾಂಗ್ರೆಸ್‍ನ್ನು ಹಿಂದೆಂದೂ ಕಾಣದ ರೀತಿಯಲ್ಲಿ ಹೀನಾಯವಾಗಿ ಸೋಲಿಸಲಿದ್ದಾರೆ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಮಲ್ಲಿಕಾರ್ಜುನ್ ಖರ್ಗೆ, ಡಿ.ಕೆ.ಶಿವಕುಮಾರ್ ಸೇರಿದಂತೆ ಯಾರೂ ಕೂಡ ಒಂದೇ ವೇದಿಕೆಯಲ್ಲಿ ಪ್ರಚಾರ ನಡೆಸುತ್ತಿಲ್ಲ. ಮನೆಯೊಂದು ಮೂರು ಬಾಗಿಲು ಎಂಬಂತೆ ಅವರವರ ಕ್ಷೇತ್ರದಲ್ಲೇ ಪ್ರಚಾರ ನಡೆಸುತ್ತಿದ್ದಾರೆ. ಪರಸ್ಪರ ಅಪನಂಬಿಕೆಯೇ ಕಾಂಗ್ರೆಸ್‍ಗೆ ಮುಳುವಾಗಲಿದೆ. ರಾಷ್ಟ್ರೀಯ ನಾಯಕರ ಸೂಚನೆಯಂತೆ ರಾಜ್ಯಾಧ್ಯಕ್ಷರಾದ ಯಡಿಯೂರಪ್ಪನವರು ರಾಜ್ಯದ 224 ಕ್ಷೇತ್ರಗಳಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಹೋದ ಕಡೆಯಲೆಲ್ಲ ಅವರಿಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ನಮ್ಮ ಗುರಿಯನ್ನು ದಾಟಲು ಇದು ಅನುಕೂಲವಾಗಲಿದೆ ಎಂದರು.

ನರೇಂದ್ರ ಮೋದಿ ಅವರು ನಮ್ಮ ಪಕ್ಷದ ತಾರಾ ಪ್ರಚಾರಕರಾಗಿರುವುದರಿಂದ ರಾಜ್ಯಕ್ಕೆ ಬಂದು ಪ್ರಚಾರ ನಡೆಸುತ್ತಿದ್ದಾರೆ. ಅವರಿಗೆ ವ್ಯಕ್ತವಾಗುತ್ತಿರುವ ಯಶಸ್ಸನ್ನು ಕಂಡು ಸಿದ್ಧರಾಮಯ್ಯ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅಧಿಕಾರ ಕಳೆದುಕೊಳ್ಳುವ ಸಂದರ್ಭದಲ್ಲಿ ಇವೆಲ್ಲವೂ ಮಾಮೂಲಿ. ಅವರ ಮಾತುಗಳಿಗೆ ಯಾವುದೇ ಕಿಮ್ಮತ್ತು ಇಲ್ಲ ಎಂದು ವ್ಯಂಗ್ಯವಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ