ಮೈಸೂರು, ಮೇ 7- ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರದಲ್ಲೇ ಮುಳುಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಬೆಳಗಿನಿಂದಲೇ ತಮ್ಮ ನಿವಾಸದಲ್ಲೇ ಸ್ಥಳೀಯ ಮುಖಂಡರೊಂದಿಗೆ ಚರ್ಚಿಸಿ ಗೆಲ್ಲುವ ರಣತಂತ್ರ ರೂಪಿಸುತ್ತಿದ್ದಾರೆ.
ರಾಮಕೃಷ್ಣ ನಗರದ ತಮ್ಮ ನಿವಾಸದಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಡೆದಿರುವ ಬೆಳವಣಿಗೆಗಳ ಬಗ್ಗೆ ಸ್ಥಳೀಯ ಕಾಂಗ್ರೆಸ್ ನಾಯಕರಿಂದ ಸ್ವತಃ ಮುಖ್ಯಮಂತ್ರಿ ಪಡೆದುಕೊಂಡರು.
ಇಂದು ಬೆಳಗ್ಗೆ ಅವರ ನಿವಾಸಕ್ಕೆ ಆಗಮಿಸಿದ ಕೈ ಮುಖಂಡರು ಈಗಾಗಲೇ ಮುಖ್ಯಮಂತ್ರಿಗಳು ಚಾಮುಂಡೇಶ್ವರಿ ಕ್ಷೇತ್ರದಲ್ಲಿ 4 ಬಾರಿ ಪ್ರಚಾರ ಮಾಡಿ ತೆರಳಿದ್ದರಿಂದ ಈಗಿನವರೆಗೂ ಆಗಿರುವ ಬೆಳವಣಿಗೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸಿದ್ದಾರೆ.
ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ಕೆಲವು ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಚುನಾವಣೆ ಸಮೀಪಿಸುತ್ತಿರುವುದರಿಂದ ಬಾಕಿ ಇರುವ ದಿನಗಳಲ್ಲಿ ಕೈಗೊಳ್ಳಬೇಕಾದ ಕಾರ್ಯತಂತ್ರಗಳೇನು ಎಂಬುದೂ ಸೇರಿದಂತೆ ಗೆಲುವಿಗಾಗಿ ಕೆಲವು ಸಲಹೆ ಸೂಚನೆಗಳನ್ನು ಮುಖ್ಯಮಂತ್ರಿ ಕಾರ್ಯಕರ್ತರಿಗೆ ನೀಡಿದ್ದಾರೆ.
ಈವರೆಗೂ ತಾವು ಸ್ಪರ್ಧಿಸಿರುವ ಚಾಮುಂಡೇಶ್ವರಿ-ಬಾದಾಮಿ ಕ್ಷೇತ್ರ ಸೇರಿದಂತೆ ರಾಜ್ಯದ ಹಲವೆಡೆ ಕಾಂಗ್ರೆಸ್ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದ ಅವರು ಮತ್ತೆ ಸ್ವಕ್ಷೇತ್ರ ಚಾಮುಂಡೇಶ್ವರಿಯಲ್ಲಿ ಪ್ರಚಾರ ಕೈಗೊಳ್ಳುವ ನಿಟ್ಟಿನಲ್ಲಿ ಮುಖಂಡರೊಂದಿಗೆ ಚರ್ಚಿಸಿದರು.
ನಾಳೆಯಿಂದ ಇನ್ನು ಎರಡು ದಿನಗಳ ಕಾಲ ಮತದಾರರ ಮನೆ ಮನೆಗೆ ತೆರಳಿ ಮತಯಾಚಿಸಿ ಹಾಗೂ ರೋಡ್ಶೋ ಮೂಲಕ ಪ್ರಚಾರ ಮಾಡಲಿದ್ದಾರೆ.
ಇಂದು ತಮ್ಮ ನಿವಾಸದಲ್ಲಿ ಸುದೀರ್ಘ ಚರ್ಚೆ ನಡೆಸಿದರು.ನಂತರ ವಿಶೇಷ ವಿಮಾನದ ಮೂಲಕ ಚಾಮರಾಜನಗರಕ್ಕೆ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದರು.
ಅನಂತರ ನಂಜನಗೂಡಿನ ಕಳಲೆಕೇಶವಮೂರ್ತಿ ಪರ ಮತಯಾಚಿಸಿದರು.