ಬೀದರ, ಮೇ. 07:- ಬೀದರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಶಾಸಕ ರಹೀಮ್ಖಾನ್ ಅವರು ಬೀದರ ನಗರ ಹಾಗೂ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು.
ನಗರದ ಯಲ್ಲಾಲಿಂಗ ಕಾಲೊನಿ, ಸಾಯಿ ಕಾಲೊನಿ, ಅಲಿಯಾಬಾದ್, ಹೌಸಿಂಗ್ ಬೋರ್ಡ್ ಕಾಲೊನಿ, ಪ್ರತಾಪನಗರ, ಹೂಗೇರಿ, ಕಂಗಟಿ, ಬಸಂತಪೂರ್, ಮಿರ್ಜಾಪೂರ್, ಕನ್ನಳ್ಳಿ, ಚಿಲ್ಲರ್ಗಿಯಲ್ಲಿ ಪಾದಯಾತ್ರೆ, ಮನೆ ಮನೆ ಭೇಟಿ ಹಾಗೂ ಪ್ರಚಾರ ಸಭೆಗಳ ಮೂಲಕ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ಮತದಾರರಲ್ಲಿ ಮನವಿ ಮಾಡಿದರು.
ಮತದಾರರು ಕೇಂದ್ರದ ಬಿಜೆಪಿ ಸರ್ಕಾರದ ನಾಲ್ಕು ವರ್ಷಗಳ ಸಾಧನೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯದ ಕಾಂಗ್ರೆಸ್ ಸರ್ಕಾರದ ಐದು ವರ್ಷಗಳ ಸಾಧನೆಯನ್ನು ಒರೆಗೆ ಹೆಚ್ಚಬೇಕು. ಯಾರು ಜನರ ಪರವಾಗಿ ನಿಂತಿದ್ದಾರೆ ಎಂಬುದ್ದನ್ನು ಅರಿತು ಮತ ಚಲಾಯಿಸಬೇಕು ಎಂದು ರಹೀಮ್ಖಾನ್ ಹೇಳಿದರು.
ಕೇಂದ್ರ ಸರ್ಕಾರ ಹಳೆಯ ನೋಟುಗಳ ಅಪಮೌಲ್ಯ ಹಾಗೂ ಜಿಎಸ್ಟಿ ಜಾರಿ ಮಾಡಿದ್ದರಿಂದ ದೇಶದ ಜನ ಒಂದು ವರ್ಷ ತೀವ್ರ ಸಂಕಷ್ಟ ಎದುರಿಸಬೇಕಾಯಿತು. ಬಡವರು, ಮಧ್ಯಮ ವರ್ಗದವರು, ಶ್ರೀಮಂತರು ಸೇರಿ ಎಲ್ಲರೂ ತೀವ್ರ ತೊಂದರೆ ಅನುಭವಿಸಬೇಕಾಯಿತು. ಸಿದ್ದರಾಮಯ್ಯ ಸರ್ಕಾರ ಪ್ರಣಾಳಿಕೆಯಲ್ಲಿನ ಎಲ್ಲ ಭರವಸೆಗಳನ್ನು ಈಡೇರಿಸಿದೆ. ಬೀದರ ಜಿಲ್ಲೆಗೆ ಸಾವಿರಾರು ಕೋಟಿ ರೂ. ಅನುದಾನ ಕೊಟ್ಟಿದೆ. ಬೀದರ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳು ಆಗಿವೆ. ಜನರಿಗೆ ಶಾಶ್ವತ ಪರಿಹಾರ ಕಲ್ಪಿಸುವ ಕಾಮಗಾರಿಗಳು ಪೂರ್ಣಗೊಳ್ಳಲು ದೀರ್ಘ ಅವಧಿ ಹಿಡಿಯುತ್ತದೆ. ಇದನ್ನೇ ಅಪೂರ್ಣ ಎಂದು ಪ್ರತಿಪಕ್ಷದವರು ಬಿಂಬಿಸುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ನಾನು ಏನು ಕೆಲಸ ಮಾಡಿದ್ದೇನೆಂಬುದು ಕ್ಷೇತ್ರದ ಜನರಿಗೆ ಗೊತ್ತಿದೆ. ನನ್ನ ಕೆಲಸ ನೋಡಿ ಮತದಾರರು ಚುನಾವಣೆಯಲ್ಲಿ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಪಕ್ಷದ ಮುಖಂಡರು, ಗಣ್ಯರು, ಕಾರ್ಯಕರ್ತರು ಭಾಗವಹಿಸಿದ್ದರು.