ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ಮತ್ತು ಕರ್ನಾಟಕ ರಾಜ್ಯವನ್ನು ಅವಮಾನಿಸಿದ್ದಾರೆ: ಡಾ.ಜಿ.ಪರಮೇಶ್ವರ್ ಆಕ್ರೋಶ

ಬೆಂಗಳೂರು, ಮೇ 4-ಬೆಂಗಳೂರನ್ನು ಪಾಪದ ನಗರ ಎಂದು ಆರೋಪಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ಮತ್ತು ಕರ್ನಾಟಕ ರಾಜ್ಯವನ್ನು ಅವಮಾನಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷದ ಕಚೇರಿಯಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಪ್ರಚಾರದಲ್ಲಿ ಮೋದಿಯವರ ಮಾತುಗಳಿಗೆ ತೀವ್ರ ಕಿಡಿಕಾರಿದರು.

ದೇಶದಲ್ಲೇ ಮಾಹಿತಿ ತಂತ್ರಜ್ಞಾನದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವುದು ಬೆಂಗಳೂರು, ವಿಶ್ವ ಆರ್ಥಿಕ ಒಕ್ಕೂಟದಿಂದ ಡೈನಾಮಿಕ್ ಸಿಟಿ ಎಂಬ ಕೀರ್ತಿ ಪಡೆದುಕೊಂಡಿದೆ. ಕೆಲವು ಸಣ್ಣಪುಟ್ಟ ಸಮಸ್ಯೆಗಳಿರಬಹುದು. ಅದನ್ನು ಸರಿಪಡಿಸಲು ಪ್ರಧಾನಿಯಾಗಿದ್ದವರು ಹೆಚ್ಚಿನ ಅನುದಾನ ನೀಡಬೇಕು ಅಥವಾ ಬೆಂಗಳೂರನ್ನೇ ದತ್ತು ಪಡೆಯಬೇಕಿತ್ತು. ಅದನ್ನು ಬಿಟ್ಟು ಅವಮಾನಿಸುವಂತೆ ಮಾತನಾಡಿರುವುದನ್ನು ನಾಡಿನ ಜನ ಕ್ಷಮಿಸುವುದಿಲ್ಲ ಎಂದರು.

ಮೋದಿಯವರು ಇಡೀ ದೇಶಕ್ಕೆ ಪ್ರಧಾನಿ. ಬೆಂಗಳೂರು ದೇಶದ ಒಂದು ಭಾಗ. ತನ್ನ ದೇಶದ ಒಂದು ಭಾಗ ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ಬಗ್ಗೆ ಪ್ರಧಾನಿಯವರಿಗೆ ಹೆಮ್ಮೆ ಇರಬೇಕಿತ್ತು. ಆದರೆ ಚುನಾವಣೆ ಕಾರಣಕ್ಕಾಗಿ ಪಾಪದ ನಗರ, ಅಪರಾಧದ ನಗರ ಎಂದು ಹೇಳಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿಗೆ ಅವಮಾನ ಮಾಡಿದ್ದಾರೆ ಎಂದು ಪರಮೇಶ್ವರ್ ತಿರುಗೇಟು ನೀಡಿದರು.

ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡದೆ ಇರುವುದಕ್ಕೆ ಮೋದಿ ಕಾಂಗ್ರೆಸ್ಸನ್ನು ಟೀಕಿಸಿದ್ದಾರೆ. ಅದೇ ಖರ್ಗೆ ಅವರಿಗೆ ಕೇಂದ್ರದಲ್ಲಿ ವಿರೋಧ ಪಕ್ಷದ ಸ್ಥಾನಮಾನ ನೀಡದೆ ಇದೇ ಮೋದಿ ಅವಮಾನ ಮಾಡಿದ್ದಾರೆ ಎಂದರು.

ಕಾಂಗ್ರೆಸ್, ಸುಶೀಲ್‍ಕುಮಾರ್‍ನಂತಹ ದಲಿತ ನಾಯಕನನ್ನು ಮುಖ್ಯಮಂತ್ರಿ, ಕೇಂದ್ರಸಚಿವ, ರಾಜ್ಯಪಾಲನನ್ನಾಗಿ ಮಾಡಿದೆ. ಆರ್.ಕೆ.ನಾರಾಯಣ್‍ರಂತಹ ದಲಿತ ವ್ಯಕ್ತಿಯನ್ನು ಉಪರಾಷ್ಟ್ರಪತಿ, ರಾಷ್ಟ್ರಪತಿ ಮಾಡಿದೆ. ಕಾಂಗ್ರೆಸ್‍ನ ದಲಿತರ ಕಾಳಜಿ ಬಗ್ಗೆ ಬಿಜೆಪಿಯಿಂದ ಪಾಠ ಹೇಳಿಸಿಕೊಳ್ಳಬೇಕಿಲ್ಲ. ಬಿಜೆಪಿಯವರಿಗೆ ಕಾಂಗ್ರೆಸ್ಸನ್ನು ಟೀಕಿಸುವ ಯಾವುದೇ ನೈತಿಕ ಹಕ್ಕಿಲ್ಲ. ಇದು ಚುನಾವಣಾ ಸಮಯ.

ದಲಿತರ ಬಗ್ಗೆ ಭಾಷಣ ಬಿಗಿಯುವ ಮೋದಿಯವರು, ಬಿಜೆಪಿಯಲ್ಲಿರುವ ಗೋವಿಂದ ಕಾರಜೋಳ ಸೇರಿದಂತೆ ಯಾವುದೇ ನಾಯಕರನ್ನು ಮುಖ್ಯಮಂತ್ರಿ ಮಾಡುವುದಾಗಿ ಘೋಷಿಸಲಿ ಎಂದು ಸವಾಲು ಹಾಕಿದರು.
ದೇಶಾದ್ಯಂತ ದಲಿತ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಬಹಿರಂಗವಾಗಿ ಬೆತ್ತಲೆ ಮಾಡಿ ಅವಮಾನಿಸಲಾಗುತ್ತಿದೆ. ದಲಿತರ ಮನೆಗಳಿಗೆ ಬೆಂಕಿ ಹಚ್ಚಿ ಸುಡಲಾಗುತ್ತಿದೆ. ಇಂತಹ ಸಂಕಷ್ಟ ಸಮಯದಲ್ಲಿ ದಲಿತ ದೌರ್ಜನ್ಯ ಕಾಯ್ದೆ ದುರ್ಬಲವಾಗಲು ಕೇಂದ್ರಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಆದರೂ ಮೋದಿಯವರು ಕಾಂಗ್ರೆಸ್‍ನ ದಲಿತ ಕಾಳಜಿಯನ್ನು ಪ್ರಶ್ನೆ ಮಾಡುತ್ತಾರೆ. ಇದು ವಿಪರ್ಯಾಸ ಎಂದರು.
ಸದ್ಯಕ್ಕೆ ನಮ್ಮ ಮುಂದೆ ದಲಿತ ಮುಖ್ಯಮಂತ್ರಿಯ ವಿಷಯ ಚರ್ಚೆಯ ವಸ್ತುವಲ್ಲ. ಚುನಾವಣೆಯಲ್ಲಿ 113 ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿಯುವುದು ನಮ್ಮ ಆದ್ಯತೆ. ನಂತರ ಶಾಸಕಾಂಗ ಸಭೆ ನಡೆಯಲಿದೆ. ಅಲ್ಲಿ ನಾಯಕರ ಆಯ್ಕೆ ನಡೆಯಲಿದೆ. ಅದಕ್ಕೆ ಹೈಕಮಾಂಡ್ ಒಪ್ಪಿಗೆ ನೀಡುತ್ತದೆ. ಆ ಮೂಲಕ ಮುಂದಿನ ಮುಖ್ಯಮಂತ್ರಿ ಆಯ್ಕೆ ನಡೆಯಲಿದೆ ಎಂದರು.
ಆದರೆ ಈಗಾಗಲೇ ಸಿದ್ದರಾಮಯ್ಯ ಅವರು ನಾನೇ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್ ಅವರು, ನಾನು ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಬಗ್ಗೆ ಮಾತನಾಡುತ್ತಿದ್ದೇನೆ. ಸಿದ್ದರಾಮಯ್ಯ ಈಗ ನಮ್ಮ ಮುಖ್ಯಮಂತ್ರಿಯಾಗಿದ್ದಾರೆ. ಮುಂದೆ ನಾನೇ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುವುದು ಸಹಜ ಎಂದರು.

ಮೋದಿಯವರು ರಾಜ್ಯದಲ್ಲಿ ಪ್ರವಾಸ ಕೈಗೊಂಡು ನೀಡಿರುವ ಹೇಳಿಕೆಗಳು ಸಂಪೂರ್ಣ ಸುಳ್ಳು. ಯಾವುದೂ ಸತ್ಯವಲ್ಲ. ಇನ್ನು ಕಾಂಗ್ರೆಸ್‍ನಲ್ಲಿ 2+1, 1+1 ಟಿಕೆಟ್ ಹಂಚಿಕೆ ಮಾಡಲಾಗಿದೆ ಎಂದು ಮೋದಿ ಆರೋಪ ಮಾಡಿದ್ದಾರೆ. ಅದು ಯಾವುದೋ ಸಣ್ಣ ಮಟ್ಟದ ನಾಯಕರು ಹೇಳಬೇಕಾದಂತಹ ವಿಷಯ. ಪ್ರಧಾನಿ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನಂತವರು ಚರ್ಚೆ ಮಾಡಬೇಕಾದ ವಿಷಯವಲ್ಲ. ಏಕೆಂದರೆ ಮೋದಿ ಕೂಡ ಲೋಕಸಭೆ ಚುನಾವಣೆಯಲ್ಲಿ ಎರಡು ಕ್ಷೇತ್ರದಲ್ಲಿ ನಿಂತಿದ್ದರು ಎಂದು ಪ್ರತ್ಯುತ್ತರಿಸಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ. ಅತಂತ್ರ ವಿಧಾನಸಭೆ ಎಂಬ ಊಹೆ ಸುಳ್ಳು ಎಂದು ಹೇಳಿದರು.

ಇನ್ನು ಭ್ರಷ್ಟಾಚಾರದ ಬಗ್ಗೆ ಮೋದಿ ಆಧಾರರಹಿತವಾಗಿ ಮಾತನಾಡುತ್ತಿದ್ದಾರೆ. ಅವರ ಆರೋಪಗಳಿಗೆ ದಾಖಲೆಗಳಿದ್ದರೆ ಜನರ ಮುಂದಿಡಲಿ. ಅದನ್ನು ಬಿಟ್ಟು ಪ್ರಧಾನಿ ಹುದ್ದೆಯ ಘನತೆ ಮರೆತು ಆಧಾರ ರಹಿತವಾಗಿ ಬಾಯಿಗೆ ಬಂದಂತೆ ಮಾತನಾಡಬಾರದು ಎಂದು ಸಲಹೆ ನೀಡಿದರು
ದೇಶಾದ್ಯಂತ 12 ಸಾವಿರ ರೈತರ ಆತ್ಮಹತ್ಯೆಗಳು ನಡೆದಿವೆ. ಕೇಂದ್ರಸರ್ಕಾರ ಕೃಷಿ ಸಾಲ ಮನ್ನಾ ಮಾಡಿಲ್ಲ. ಕನಿಷ್ಠ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಸಾಂಕೇತಿಕವಾಗಿ ಭೇಟಿ ನೀಡಿ ಸಾಂತ್ವನ ಹೇಳುವ ಕೆಲಸವನ್ನೂ ಮಾಡಿಲ್ಲ. ರೈತರ ಬಗ್ಗೆ ಉದ್ದುದ್ದ ಭಾಷಣ ಮಾಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸದಾಶಿವ ಆಯೋಗದ ವರದಿಗೆ ವಿರೋಧವಿಲ್ಲ:
ಪತ್ರಿಕಾಗೋಷ್ಠಿಯಲ್ಲಿ ಸದಾಶಿವ ಆಯೋಗದ ವರದಿ ಬಗ್ಗೆ ಪ್ರಮುಖವಾಗಿ ಪ್ರಸ್ತಾಪಿಸಿದ ಪರಮೇಶ್ವರ್ ಅವರು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಸದಾಶಿವ ಆಯೋಗದ ವರದಿ ಜಾರಿಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಭರವಸೆ ನೀಡಿದರು.
ಆ ವರದಿಗೆ ನಾನು ವಿರೋಧ ವ್ಯಕ್ತಪಡಿಸುತ್ತಿದ್ದೇನೆ ಎಂದು ನನ್ನ ವಿರುದ್ಧ ವೈಯಕ್ತಿಕ ಟೀಕೆಗಳನ್ನು ಮಾಡಲಾಗುತ್ತಿದೆ. ನಾನು ಎಂದಿಗೂ ಆ ವರದಿಯನ್ನು ವಿರೋಧಿಸಿಲ್ಲ. ನಾನು ಸಚಿವನಾಗಿದ್ದಾಗಲೇ ಸಂಪುಟದಲ್ಲಿ ಸದಾಶಿವ ಆಯೋಗ ರಚನೆಯ ನಿರ್ಣಯ ಕೈಗೊಳ್ಳಲಾಯಿತು. ಅನಗತ್ಯವಾಗಿ ಈ ವಿಚಾರದಲ್ಲಿ ಗೊಂದಲ ಸೃಷ್ಟಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬಿಜೆಪಿ ಶಾಸಕ ವಿಜಯ್‍ಕುಮಾರ್ ಅವರ ನಿಧನಕ್ಕೆ ಪರಮೇಶ್ವರ್ ಇದೇ ವೇಳೆ ಸಂತಾಪ ಸೂಚಿಸಿದರು.
ಬಿಜೆಪಿ ಪ್ರಣಾಳಿಕೆಯಲ್ಲಿ ರೈತರ ಸಾಲಮನ್ನಾದ ಭರವಸೆ ನೀಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪರಮೇಶ್ವರ್, ಈ ಹಿಂದೆ ಅವರು ಅಧಿಕಾರದಲ್ಲಿದ್ದಾಗ ರೈತರ ಸಾಲವನ್ನು ಏಕೆ ಮನ್ನಾ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ನಾವು ನಮ್ಮ ಪ್ರಣಾಳಿಕೆಯ ಭರವಸೆಯಲ್ಲಿ ಶೇ.95ರಷ್ಟು ಈಡೇರಿಸಿದ್ದೇವೆ. ಆದರೆ ಬಿಜೆಪಿಯವರು ಯಾವುದನ್ನೂ ಈಡೇರಿಸಿಲ್ಲ ಎಂದು ಪರಮೇಶ್ವರ್ ಟಾಂಗ್ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ