ರಾಮನಗರ:ಮೇ-4: ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಪುತ್ರ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಅವರೇ ಮುಖ್ಯಮಂತ್ರಿಯಾಗಲು ಅವಕಾಶವಿದ್ದು, ಈ ನಿಟ್ಟಿನಲ್ಲಿ ಒಕ್ಕಲಿಗರು ಒಗ್ಗಟ್ಟಾಗಿ ಚನ್ನಪಟ್ಟಣದಲ್ಲಿ ಹೆಚ್.ಎಂ. ರೇವಣ್ಣ ಅವರನ್ನು ಗೆಲ್ಲಿಸಲೇಬೇಕಾಗಿದೆ ಎಂದು ಒಕ್ಕಲಿಗ ಮುಖಂಡರು ಕರ ಪತ್ರ ಹೊರಡಿಸಿದ್ದಾರೆ.
ಮುಖ್ಯಮಂತ್ರಿಯಾಗಲು ಡಿ.ಕೆ. ಶಿವಕುಮಾರ್ ಅವರಿಗೆ ಹೆಚ್ಚಿನ ಅವಕಾಶವಿದೆ. ಕಾಂಗ್ರೆಸ್ ಹೈಕಮಾಂಡ್ ಜೊತೆ ಶಿವಕುಮಾರ್ಗೆ ಉತ್ತಮ ಬಾಂಧವ್ಯ ಇದೆ. ಹಾಗಾಗಿ ಶಿವಕುಮಾರ್ ಅವರೇ ಮುಖ್ಯಮಂತ್ರಿ ಎಂದು ಕರ ಪತ್ರದಲ್ಲಿ ಮುದ್ರಿಸಲಾಗಿದೆ. ಚನ್ನಪಟ್ಟಣ ಕ್ಷೇತ್ರದ ಒಕ್ಕಲಿಗರ ವಾಟ್ಸ್ ಆ್ಯಪ್ ಗುಂಪುಗಳಲ್ಲಿ ಈ ಕರಪತ್ರ ಶೇರ್ ಮಾಡಲಾಗಿದ್ದು, ಇದು ಸಮುದಾಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಯೋಗೇಶ್ವರ್ ಅಭಿವೃದ್ಧಿ ಶೂನ್ಯ, ಪಕ್ಷ ಬದಲಿಸುತ್ತಾ ಮುಖಂಡರ ವಿರೋಧ ಕಟ್ಟಿಕೊಂಡಿದ್ದಾರೆ. ಅವರ ಹುಟ್ಟೂರಲ್ಲೇ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲ. ಕುಮಾರಸ್ವಾಮಿ ಅವರು ರಾಮನಗರದಲ್ಲಿ ಗೆಲುವು ಸಾಧಿಸಲಿದ್ದು, ಅವರು ಗೆದ್ದರೆ ಉಪಚುನಾವಣೆ ಎದುರುಸಬೇಕಾಗುತ್ತದೆ ಎನ್ನುವ ಮಾತುಗಳು ಕೇಳಿಬಂದಿವೆ.
ಅಲ್ಲದೇ ಡಿಕೆಶಿ ನಿಜವಾದ ಒಕ್ಕಲಿಗ ನಾಯಕರಾಗಿದ್ದು, ಅವರೇಕೆ ಮುಖ್ಯಮಂತ್ರಿ ಆಗಬಾರದು ಎಂಬ ಚರ್ಚೆಗಳು ನಡೆಯುತ್ತಿವೆ. ಹಲವು ಸಮೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷ ಈ ಬಾರಿ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸಲಿದೆ ಎಂದು ಭವಿಷ್ಯ ನುಡಿದಿವೆ. ಈ ಸಂದರ್ಭದಲ್ಲಿ ಡಿಕೆಶಿ ತಂತ್ರಗಾರಿಕೆ ವರವಾಗಲಿದೆ. ಅವರೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ವಾಟ್ಸಪ್ ಗಳಲ್ಲಿ ವೈರಲ್ ಆಗಿರುವ ಈ ಕರ ಪತ್ರ ಈಗ ಚರ್ಚೆಗೆ ಗ್ರಾಸವಾಗಿದೆ.
karnataka assembly eection,D K Shivakumar,CM