ವಿಶ್ವಸಂಸ್ಥೆ, ಮೇ 3-ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಪಾಕಿಸ್ತಾನದ ಚಕಾರಕ್ಕೆ ಭಾರತ ತಿರುಗೇಟು ನೀಡಿದ ಪ್ರಸಂಗ ವಿಶ್ವಸಂಸ್ಥೆಯ ಮಾಹಿತಿ ಸಭೆಯಲ್ಲಿ ನಡೆದಿದೆ.
ಸಂಯುಕ್ತ ರಾಷ್ಟ್ರಗಳ (ಯುಎನ್) ಮಾಹಿತಿ ಸಮಿತಿ ಅಧಿವೇಶನದ ಸಾಮಾನ್ಯ ಚರ್ಚೆಯಲ್ಲಿ ನಿನ್ನೆ ಪಾಕಿಸ್ತಾನ ಪ್ರತಿನಿಧಿ ಮಸೂದ್ ಅನ್ವರ್ ಕಾಶ್ಮೀರ ವಿಷಯ ಪ್ರಸ್ತಾಪಿಸಿ, ಕಣಿವೆ ರಾಜ್ಯದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಿದರು. ಅಲ್ಲಿನ ಉದ್ವಿಗ್ನ ಪರಿಸ್ಥಿತಿ ನಿವಾರಣೆ ಹಾಗೂ ಅಂತರ್ಧರ್ಮಿಯ ಸೌಹಾರ್ದತೆ ನಿರ್ಮಾಣದಲ್ಲಿ ವಿಶ್ವಸಂಸ್ಥೆಯ ಸಾರ್ವಜನಿಕ ಮಾಹಿತಿ ಇಲಾಖೆ(ಡಿಪಿಐ) ಬಹು ಮುಖ್ಯ ಪಾತ್ರ ವಹಿಸಬಹುದಾಗಿದೆ ಎಂದರು.
ಅನ್ವರ್ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವಿಶ್ವಸಂಸ್ಥೆಗೆ ಭಾರತೀಯ ನಿಯೋಗದ ಸಚಿವ ಎಸ್.ಶ್ರೀನಿವಾಸ ಪ್ರಸಾದ್, ಸಮಿತಿಯ ಕಾರ್ಯಸೂಚಿಯಲ್ಲಿ ಇರದ ವಿಷಯವನ್ನು ಪಾಕಿಸ್ತಾನ ಈ ಸಭೆಯಲ್ಲಿ ವಿನಾಕಾರಣ ಪ್ರಸ್ತಾಪಿಸಿದೆ. ಸಮಿತಿಗೆ ಯಾವ ರೀತಿಯಲ್ಲಿಯೂ ಸಂಬಂಧವೇ ಇರದ ಈ ಅಪ್ರಸ್ತುತ ಹೇಳಿಕೆಯನ್ನು ನಾವು ಸಂಪೂರ್ಣವಾಗಿ ತಿರಸ್ಕರಿಸುತ್ತೇವೆ ಎಂದರು. ಭಯೋತ್ಪಾದನೆ ನಿಗ್ರಹಕ್ಕೆ ಈ ಸಮಿತಿ ಬೆಂಬಲ ನೀಡುತ್ತಿದೆ. ಆದರೆ ಮಾನವ ಹಕ್ಕುಗಳ ಉಲ್ಲಂಘನೆ ವಿಚಾರವು ಬೇರೆ ಸಮಿತಿಗೆ ಸಂಬಂಧಪಟ್ಟಿದ್ದಾಗಿದೆ ಎಂದು ಪ್ರಸಾದ್ ತಿಳಿಸಿದ್ದಾರೆ.