ಜೈಪುರ:ಮೇ-3: ರಾಜಸ್ಥಾನದಲ್ಲಿ ಭಾರೀ ಬಿರುಗಾಳಿ ಸಹಿತ ಮಳೆಗೆ 27 ಜನ ಬಲಿಯಾಗಿದ್ದು 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ರಾತ್ರಿ ರಾಜಸ್ಥಾನದ ಹಲವು ಪ್ರದೇಶಗಳಲ್ಲಿ ಭಾರೀ ಬಿರುಗಾಳಿ ಬೀಸಿದೆ. ಭರತಪುರದಲ್ಲಿ 11 ಜನ, ಅಲ್ವಾರಾ 4, ಧೋಲ್ಪುರ 5, ಬಿಕೇನಾರ್ ಮತ್ತು ಜೂನಾಜುನ್ನಲ್ಲಿ ಒಬ್ಬರು ಬಲಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡವರಲ್ಲಿ ಹಲವರು ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಬಿರುಗಾಳಿಯ ರಭಸಕ್ಕೆ 100ಕ್ಕೂ ಹೆಚ್ಚು ಮರಗಳು ಹಾಗೂ 1000ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಭರತಪುರ, ಅಲ್ವಾರಾ ಮತ್ತು ಧೋಲ್ಪುರದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಸಂಜೆ ಹಾಗೂ ರಾತ್ರಿ ಮನೆಯಿಂದ ಹೊರ ಬರದಂತೆ ಜನರಿಗೆ ಎಚ್ಚರಿಕೆ ನೀಡಲಾಗಿದೆ. ವೈದ್ಯಕೀಯ ಹಾಗೂ ಪ್ರಕೃತಿ ವಿಕೋಪ ನಿರ್ವಹಣಾ ತಂಡ ಸ್ಥಳದಲ್ಲಿ ಮೊಕ್ಕಂ ಹೊಡಿದ್ದು ಅಗತ್ಯ ಮುನ್ನೆಚ್ಚರಿಕೆ ಕ್ರಮಗೈಗೊಂಡಿವೆ ಎಂದು ರಾಜಸ್ಥಾನ ಸರ್ಕಾರ ತಿಳಿಸಿದೆ.
ಇನ್ನು ರಾಜಸ್ಥಾನ ಮಾತ್ರವಲ್ಲದೇ ಉತ್ತರ ಭಾರತದ ಹಲವೆಡೆ ಬುಧವಾರ ರಾತ್ರಿ ಅಕಾಲಿಕ ಮಳೆಯಾಗಿದ್ದು, ಅವಘಡಗಳಿಗೆ ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಗುಡುಗು ಮಿಂಚು, ಬಿರುಗಾಳಿಯೊಂದಿಗೆ ಭಾರಿ ಮಳೆಯಾಗಿದ್ದು, ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ಜನರಿಗೆ ಮಳೆ ತಂಪೆರೆದಿದೆ. ಆದರೆ ರೈತರು ಅಕಾಲಿಕ ಮಳೆಯಿಂದ ಅಪಾರ ಪ್ರಮಾಣದ ಬೆಳೆ ಹಾನಿಗೆ ಗುರಿಯಾಗಿದ್ದಾರೆ.
Heavy rains,Rajasthan,27 dead